ಪ್ರಶ್ನೆಪತ್ರಿಕೆ ಸೋರಿಕೆಯ ಕಿಂಗ್ಪಿನ್ ಶಿವಕುಮಾರ್ ಸ್ನೇಹಿತನ ಮನೆಯಲ್ಲಿ 400 ಹಾಲ್ ಟಿಕಟ್ ಪತ್ತೆ

ಬೆಂಗಳೂರು,ನ.30- ನಾಗರಿಕ ಪೊಲೀಸ್ ಪೇದೆ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಂಧಿತನಾಗಿರುವ ಪ್ರಮುಖ ಕಿಂಗ್‍ಪಿನ್ ಶಿವಕುಮಾರ್ ಸ್ನೇಹಿತನ ಮನೆಯಲ್ಲಿ 400 ಪ್ರವೇಶ ಪತ್ರ(ಹಾಲ್ ಟಿಕೆಟ್)ಗಳು ದೊರಕಿದೆ.

ಬೆಂಗಳೂರಿನ ತುಮಕೂರು ರಸ್ತೆಯ ಮೈಲ್‍ಸ್ಟೋನ್‍ನ ಅಪಾರ್ಟ್‍ಮೆಂಟ್‍ನಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ ವೇಳೆ ಲೋಕೋಪಯೋಗಿ , ಆರೋಗ್ಯ, ಅರಣ್ಯ, ಬಿಡಬ್ಲುಎಸ್‍ಎಸ್‍ಬಿ ಸೇರಿದಂತೆ ಮತ್ತಿತರ ಇಲಾಖೆಗಳ ಪರೀಕ್ಷೆ ಎದುರಿಸಬೇಕಿದ್ದ ವಿದ್ಯಾರ್ಥಿಗಳ ಪ್ರವೇಶ ಪತ್ರ ಸಿಕ್ಕಿರುವುದು ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.

ಸದ್ಯದಲ್ಲೇ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಮೂಲಕ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಕೆಪಿಎಸ್ಸಿ ಮೂಲಕವೇ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿತ್ತು.

ಆದರೆ ಶಿವಕುಮಾರ್ ಸ್ನೇಹಿನ ಮನೆಯಲ್ಲಿ ವಿದ್ಯಾರ್ಥಿಗಳು ಬರೆಯಬೇಕಿದ್ದ ವಿವಿಧ ಪರೀಕ್ಷೆಗಳ 400 ಪ್ರವೇಶ ಪತ್ರಗಳು ಸಿಕ್ಕಿರುವುದರಿಂದ ಶಿವಕುಮಾರ್ ಹಿಂದೆ ಇನ್ನೂ ಕೆಲವು ದೊಡ್ಡ ದೊಡ್ಡ ತಿಮಿಂಗಿಲಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಶಿವಕುಮಾರ್ ಮನೆಯ ಬೆಡ್‍ರೂಮ್ ಮತ್ತು ಲಾಕರ್‍ನ್ನು ತೆರೆದಾಗ ಕೆಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ. ಇದರಲ್ಲಿ ಇನ್ನೂ ಕೆಲವು ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ವಿಸ್ತೃತವಾದ ತನಿಖೆ ನಡೆಸಲಿದ್ದೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

30 ವರ್ಷಗಳಿಂದಲೂ ಇದೇ ವೃತ್ತಿ:
ಶಿವಕುಮಾರ್ ಕಳೆದ 30 ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ವಿವಿಧ ಇಲಾಖೆಗಳ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಮುಂಚಿತವಾಗಿಯೇ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.
ಕೆಲವು ಅಧಿಕಾರಿಗಳು ಶಿವಕುಮಾರ್ ಜೊತೆ ಶಾಮೀಲಾಗಿರುವುದರಿಂದಲೇ ಪ್ರಶ್ನೆ ಪತ್ರಿಕೆ ಸುಲಭವಾಗಿ ಸೋರಿಕೆಯಾಗುತ್ತಿತ್ತು.

ಶೀಘ್ರದಲ್ಲೇ ಮತ್ತೊಬ್ಬನ ಬಂಧನ:
ನಾಗರಿಕ ಪೊಲೀಸ್ ಪೇದೆ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮತ್ತೋರ್ವ ಆರೋಪಿ ಬಸವರಾಜ್ ಎಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿಯೇ ಆತನನ್ನು ಬಂಧಿಸುವುದಾಗಿ ಸಿಸಿಬಿ ಪೊಲೀಸರು ಹೇಳಿದ್ದಾರೆ.

ಈ ಮಧ್ಯೆ ಬಂಧಿತ ಆರೋಪಿ ಶಿವಕುಮಾರ್‍ನಿಂದ ಮಹತ್ವದ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತನ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಶೀಘ್ರದಲ್ಲೇ ದೊಡ್ಡ ಹೆಸರು ಹೊರಬರಲಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಸಿಸಿಬಿ ಪೊಲೀಸರು ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಮಹತ್ವದ ಸುಳಿವು ದೊರೆತಿದ್ದು, ಆರೋಪಿಯನ್ನು ಬಂಧಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದಾರೆ.ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದು, ಸದ್ಯದಲ್ಲೇ ಸಂಪೂರ್ಣ ಮಾಹಿತಿ ದೊರೆಯಲಿದೆ ನಾಲ್ಕು ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯ ಹಲವರೊಂದಿಗೆ ಸಂಪರ್ಕ ಹೊಂದಿದ್ದರಿಂದ ಪೊಲೀಸರು ತಮ್ಮ ಬೆನ್ನತ್ತುವ ವಿಷಯ ಅರಿತು ಪರಾರಿಯಾಗಲು ಆರೋಪಿ ಯತ್ನಿಸಿದ್ದು, ಅಭ್ಯರ್ಥಿಗಳನ್ನು ಮಡಿಕೇರಿಯ ಸೋಮವಾರಪೇಟೆಯ ಕೊಡ್ಲಿಪೇಟೆಗೆ ಸ್ಥಳಾಂತರಿಸಲಾಗಿದೆ.

ಕಾನೂನು ಬಾಹಿರ ಚಟುವಟಿಕೆ ಸಂಬಂಧ ಶನಿವಾರ ಸಂತೆಯ ಕಾಳಿಮಠದ ನಂಜುಂಡಸ್ವಾಮಿ ವಿದ್ಯಾಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ