ಬೆಂಗಳೂರು, ನ.30-ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಖಚಿತವಾಗುತ್ತಿರುವಂತೆ ಕಾಂಗ್ರೆಸ್-ಜೆಡಿಎಸ್ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ.
ಕಳೆದ ಆರು ತಿಂಗಳಿನಿಂದ ಸಂಪುಟ ಸೇರಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸಚಿವಾಕಾಂಕ್ಷಿಗಳು ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.ಜೆಡಿಎಸ್ನಲ್ಲಿ ಖಾಲಿ ಇರುವ ಎರಡು ಸ್ಥಾನ, ಕಾಂಗ್ರೆಸ್ ಪಾಲಿನ ಆರು ಸ್ಥಾನಗಳಲ್ಲಿ ಒಟ್ಟು ಎಷ್ಟು ಸ್ಥಾನ ತುಂಬಬೇಕು ಎಂಬುದರ ಬಗ್ಗೆ ವರಿಷ್ಠರು ಈಗಾಗಲೇ ನಿರ್ಧಾರ ಮಾಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿ 8 ಸ್ಥಾನಗಳಲ್ಲಿ 5 ಸ್ಥಾನವನ್ನು ತುಂಬಲು ನಿರ್ಧರಿಸಿದ್ದಾರೆ.
ಜೆಡಿಎಸ್ನಿಂದ ಪರಿಶಿಷ್ಟ ಜಾತಿಯ ಒಬ್ಬರಿಗೆ, ಕಾಂಗ್ರೆಸ್ನಿಂದ ಲಿಂಗಾಯತ, ಕುರುಬ, ಪರಿಶಿಷ್ಟ ವರ್ಗ, ಒಕ್ಕಲಿಗ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನ ನೀಡಲು ತೀರ್ಮಾನಿಸಲಾಗಿದೆ.
ಕಾಂಗ್ರೆಸ್ನಿಂದ 2 ಮತ್ತು ಜೆಡಿಎಸ್ನ ಒಂದು ಸ್ಥಾನವನ್ನು ಬಾಕಿ ಉಳಿಸಿ ಮುಂದಿನ ದಿನಗಳಲ್ಲಿ ಭರ್ತಿ ಮಾಡಲಿದ್ದಾರೆ. ಜೆಡಿಎಸ್ನಲ್ಲಿ ಮಹೇಶ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಪರಿಶಿಷ್ಟ ಜಾತಿಯವರನ್ನೇ ನೇಮಕ ಮಾಡಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಕೆ.ಅನ್ನದಾನಿ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.
ಇನ್ನು ಕಾಂಗ್ರೆಸ್ನಲ್ಲಿ ರೆಡ್ಡಿ ಸಮುದಾಯದಿಂದ ರಾಮಲಿಂಗಾರೆಡ್ಡಿ, ಲಿಂಗಾಯತ ಸಮುದಾಯದಿಂದ ಬಿ.ಸಿ.ಪಾಟೀಲ್ ಅಥವಾ ಎಂ.ಬಿ.ಪಾಟೀಲ್, ಕುರುಬ ಸಮುದಾಯದಿಂದ ಎಂ.ಟಿ.ಬಿ.ನಾಗರಾಜ್ ಅಥವಾ ಸಿ.ಎಸ್.ಶಿವಳ್ಳಿ, ಪರಿಶಿಷ್ಟ ವರ್ಗದಿಂದ ತುಕಾರಾಮ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಬಹುತೇಕ ನಿರ್ಧಾರ ಮಾಡಲಾಗಿದೆ.
ಅಸಮಾಧಾನ ತಣಿಸಲು ಕಾಂಗ್ರೆಸ್ನಿಂದ 2 ಮತ್ತು ಜೆಡಿಎಸ್ನಿಂದ ಒಂದು ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.ಬಂಡಾಯ ಉಂಟಾದರೆ ಶಮನ ಮಾಡಲು ಈ ತಂತ್ರ ಅನುಸರಿಸಲಾಗಿದೆ.ಡಿಸೆಂಬರ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಡಿ.5ಕ್ಕೆ ಸಂಪುಟ ವಿಸ್ತರಣೆ ಮಾಡಲು ಮುಹೂರ್ತ ನಿಗದಿಯಾಗಲಿದೆ.
ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರಿಗೆ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಹೇಳಲಾಗಿದೆ. ಹಾಗಾಗಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಸಚಿವಾಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ.
ಎಂ.ಬಿ.ಪಾಟೀಲ್ ಅವರು ಈಗಾಗಲೇ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನಿತರ ಸಚಿವಾಕಾಂಕ್ಷಿಗಳು ಕೂಡ ವರಿಷ್ಠರೊಂದಿಗೆ ಚರ್ಚಿಸಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.ಪ್ರಸ್ತುತ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಮಾಡುವುದು ಜೇನುಗೂಡಿಗೆ ಕಲ್ಲು ಹೊಡೆದಂತಾಗುತ್ತದೆ.
ಯಾವುದೇ ರೀತಿಯ ಬಂಡಾಯವಾಗದಂತೆ ಎಚ್ಚರಿಕೆಯಿಂದ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್-ಜೆಡಿಎಸ್ ಮುಖಂಡರು ತೀರ್ಮಾನಿಸಿದ್ದಾರೆ. ಸಂಪುಟದ 5 ಸ್ಥಾನಗಳನ್ನು ಭರ್ತಿ ಮಾಡುವುದರ ಜೊತೆಗೆ ಪ್ರಮುಖ 30 ನಿಗಮ ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಸಮಾಧಾನ ತಣಿಸುವ ತಂತ್ರ ಹೆಣೆದಿದ್ದಾರೆ.
ಸದ್ಯ ಸಚಿವ ಸಂಪುಟ ವಿಸ್ತರಣೆ ಮಾಡದಿದ್ದರೆ ಅಸಮಾಧಾನಗೊಂಡವರು ಅಧಿವೇಶನಕ್ಕೆ ಗೈರಾಗುವ ಸಾಧ್ಯತೆ ಇದೆ.ಸರ್ಕಾರ ಸಾಕಷ್ಟು ಬಿಲ್ಗಳನ್ನು ಈ ಅಧಿವೇಶನದಲ್ಲಿ ಪಾಸ್ ಮಾಡಿಕೊಳ್ಳಬೇಕಿದೆ.ಅದಕ್ಕಾಗಿ ಶಾಸಕರು ಹಾಜರಿರಬೇಕು. ಹಾಗಾಗಿ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕ ಅಧಿವೇಶನಕ್ಕೂ ಮುನ್ನವೇ ನಡೆಯುವುದು ಖಚಿತ ಎನ್ನಲಾಗಿದೆ.