ಬೆಂಗಳೂರು,ನ.27-ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಗೆ ವಾಚು ಕೊಟ್ಟಿಕೊಂಡು ಹೋದರೆ ಜೋಕೆ…!
ಒಂದು ವೇಳೆ ವಿದ್ಯಾರ್ಥಿಗಳು ವಾಚ್ ಧರಿಸಿ ಪರೀಕ್ಷಾ ಕೊಠಡಿಗೆ ಹೋದರೆ ನಿಮಗೆ ಪ್ರವೇಶ ಸಿಗುವುದಿಲ್ಲ. ಏಕೆಂದರೆ ಈ ಬಾರಿಯ ಪರೀಕ್ಷೆಯಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ವಾಚ್ ಕಟ್ಟಿಕೊಳ್ಳಬಾರದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸುತ್ತೂಲೆ ಹೊರಡಿಸಿದೆ.
ವರ್ಷದಿಂದ ವರ್ಷಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಧಾರಣೆ ತರಲು ಹೆಚ್ಚು ಒತ್ತು ನೀಡುತ್ತಿರುವ ಸರ್ಕಾರ, ಈ ಬಾರಿಯ ಪರೀಕ್ಷಾ ಸಮಯದಲ್ಲಿ ಕೈಗೆ ವಾಚ್ ಕಟ್ಟದಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಸೂಚನೆ ನೀಡಬೇಕೆಂದು ಸೂಚಿಸಲಾಗಿದೆ.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.21ರಿಂದ ಆರಂಭವಾಗಲಿದೆ. ಪ್ರಸಕ್ತ ವರ್ಷ 8,38,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ವಿದ್ಯಾರ್ಥಿಗಳು ವಾಚ್‍ನೊಳಗೂ ಚೀಟಿ ಇಟ್ಟುಕೊಂಡು ಪರೀಕ್ಷೆಗೆ ಬರುತ್ತಿದ್ದರು.
ಕಳೆದ ಬಾರಿ ನಾನಾ ಪರೀಕ್ಷಾ ಕೇಂದ್ರಗಳಲ್ಲಿ ವಾಚ್‍ನೊಳಗೆ ಚೀಟಿ ಟ್ಟುಕೊಂಡು ಕಾಪಿ ಹೊಡೆದಿರುವ ಉದಾಹರಣೆಗಳಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ.
ಕೊಠಡಿಯಲ್ಲೇ ಗೋಡೆ ಗಡಿಯಾರ:
ಇನ್ನು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ತಿಳಿಯಲಿ ಎಂಬ ಕಾರಣಕ್ಕಾಗಿ ಈ ಬಾರಿಪರೀಕ್ಷಾ ಕೊಠಡಿಗಳಲ್ಲಿ ಬೃಹದಾಕಾರದ ಗೋಡೆ ಗಡಿಯಾರವನ್ನು ಹಾಕಬೇಕೆಂದು ಸಂಬಂಧಪಟ್ಟ ಶಾಲಾಕಾಲೇಜುಗಳಿಗೆ ಸೂಚಿಸಲಾಗಿದೆ.
ಸರ್ಕಾರಿ, ಅನುದಾನ, ಅನುದಾನ ರಹಿತ ಶಾಲೆಗಳಿಗೆ ಇದು ಅನ್ವಯವಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಆರಂಭದ ಸಮಯ ಹಾಗೂ ಮುಕ್ತಾಯದ ಸಮಯ ತಿಳಿಯಲಿ ಎಂಬ ಅನುಕೂಲಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಸಿಸಿ ಕ್ಯಾಮೆರಾ ಕಡ್ಡಾಯ:
ಇನ್ನು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಕ್ಯಾಮೆರಾವನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ರಾಜ್ಯದ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾವನ್ನು ಅಳವಡಿಸುವಂತೆ ಸರ್ಕಾರವೇ ಅಧಿಸೂಚನೆ ಹೊರಡಿಸಿತ್ತು. ಸಿಸಿಕ್ಯಾಮೆರಾಗಳಿದ್ದರೆ ಯಾವುದೇ ರೀತಿಯ ಪರೀಕ್ಷಾ ಅಕ್ರಮವನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಎರಡು ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳೇ ಹಣದಾಸೆಗಾಗಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಅನೇಕರನ್ನು ಬಂಧನಕ್ಕೊಳಪಡಿಸಿದ್ದರು.
ಇತ್ತೀಚಿನ ಕೆಲವು ವರ್ಷಗಳಲ್ಲಿ ಪರೀಕ್ಷಾ ಅಕ್ರಮಗಳನ್ನು ತಡೆಯಲು ಶಿಕ್ಷಣ ಇಲಾಖೆ ಸಾಕಷ್ಟು ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.