ಸುರೇಶ್ ರೈನಾಗೆ ಇಂದು ಜನ್ಮದಿನದ ಸಡಗರ-ಸಂಭ್ರಮ

ನವದೆಹಲಿ, ನ.27- ಸುರೇಶ್ ರೈನಾ-ಭಾರತೀಯ ಕ್ರಿಕೆಟ್ ತಂಡದ ಪ್ರತಿಭಾವಂತ ಆಟಗಾರ. ಅದ್ಭುತ ಬ್ಯಾಟ್ಸ್‍ಮನ್ ಆಗಿ ಮತ್ತು ಸೂಪರ್ ಫೀಲ್ಡರ್ ಆಗಿ ಕ್ರಿಕೆಟ್ ಲೋಕದಲ್ಲಿ ರೈನಾ ಮಿಂಚುತ್ತಿದ್ದಾರೆ. ಇಂದು ರೈನಾಗೆ ಜನ್ಮದಿನದ ಸಡಗರ-ಸಂಭ್ರಮ. ಅಸಂಖ್ಯಾತ ಅಭಿಮಾನಿಗಳು ಈ ತಾರೆಗೆ ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡ ಪ್ರತಿಭಾನ್ವಿತ ಆಟಗಾರ ಸುರೇಶ್ ರೈನಾ ನವೆಂಬರ್ 27, 1986ರಂದು ಜನಿಸಿದರು. ಎಡಗೈ ಬ್ಯಾಟ್ಸ್‍ಮನ್ ಆಗಿರುವ ರೈನಾ ಸಾಂದರ್ಭಿಕ ಆಫ್-ಸ್ಪಿನ್ ಬೌಲರ್. ಅತ್ಯಂತ ಕ್ಯಾಚ್‍ಗಳನ್ನು ಹಿಡಿದಿರುವ ಇವರು ವಿಶ್ವದ ಅತ್ಯುತ್ತಮ ಫೀಲ್ಡರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಆರಂಭದಲ್ಲಿ ಉತ್ತರಪ್ರದೇಶದ ಸ್ಥಳೀಯ ತಂಡಕ್ಕಾಗಿ ಆಡುತ್ತಿದ್ದ ಸುರೇಶ್ ರೈನಾ, ಇಂಡಿಯನ್ ಪ್ರೀಮಿಯರ್ ಲೀಗ್-ಐಪಿಎಲ್‍ನಲ್ಲಿ ಗುಜರಾತ್ ಲಯನ್ಸ್‍ನ ನಾಯಕರಾಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ನಾಯಕರೂ ಆಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‍ನ ಎಲ್ಲ ಮೂರು ವಿಧಗಳ ಪಂದ್ಯಗಳಲ್ಲೂ ಶತಕ ಗಳಿಸಿದ ಇಬ್ಬರು ಬ್ಯಾಟ್ಸ್‍ಮನ್‍ಗಳಲ್ಲಿ ರೈನಾ ಕೂಡ ಒಬ್ಬರು. ಒ-20 ಕ್ರಿಕೆಟ್‍ನಲ್ಲಿ ಇವರು ಅತ್ಯುತ್ತಮ ಬ್ಯಾಟ್ಸ್‍ಮನ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಜುಲೈ 2005ರಲ್ಲಿ ಶ್ರೀಲಂಕಾ ತಂಡದ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಮೂಲಕ ಇಂಟರ್‍ನ್ಯಾಷನಲ್ ಕ್ರಿಕೆಟ್‍ಗೆ ಇವರು ಕಾಲಿಟ್ಟರು. ಆಗ ರೈನಾಗೆ 19 ವರ್ಷ. 2010ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನಸೆಳೆದರು. 2011ರಲ್ಲಿ ಭಾರತ ವಿಶ್ವಕಪ್ ಕ್ರಿಕೆಟ್ ಗೆದ್ದಾಗ ಭಾರತೀಯ ತಂಡದಲ್ಲಿ ಸುರೇಶ್ ರೈನಾ ಸಹ ಪ್ರಮುಖ ಆಟಗಾರರಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ