ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಅವರ ನಿವಾಸದೆಡೆಗೆ ಸಾಗಿ ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿದ ಪೊಲೀಸರಿಗೆ ಆತನ ಚೀಲದಲ್ಲಿ ಪಾಯಿಂಟ್ 32 ಎಂಎಂ ಸಜಿವ ಗುಂಡು ಪತ್ತೆಯಾಗಿದೆ.
ಕೇಜ್ರಿವಾಲ್ ಮೇಲೆ ಕಳೆದ ನ.20ರಂದು ಸಚಿವಾಲಯದಲ್ಲಿ ಖಾರ ಪುಡಿ ಎರಚಿ ದಾಳಿ ನಡೆದ ಒಂದು ವಾರದೊಳಗೆ ಈ ಘಟನೆ ನಡೆದಿರುವುದು ಗಮನಾರ್ಹವಾಗಿದೆ.
ಪೊಲೀಸರಿಂದ ಬಂಧಿತನಾಗಿರುವ ವ್ಯಕ್ತಿ ಓರ್ವ ಮುಲ್ಲಾ ಆಗಿದ್ದು ಆತನನ್ನು ಇಮ್ರಾನ್ ಎಂದು ಗುರುತಿಸಲಾಗಿದೆ. ಈತ ಕೇಜ್ರಿವಾಲ್ ನಿವಾಸದ ಪ್ರವೇಶ ದ್ವಾರದೆಡೆಗೆ ಸಾಗಿ ಬರುತ್ತಿದ್ದಂತೆಯೇ ಆತನನ್ನು ತಡೆದು ತಪಾಸಣೆ ನಡೆಸಿದ ಪೊಲೀಸರಿಗೆ ಆತನ ಚೀಲದಲ್ಲಿ ಸಜೀವ ಗುಂಡು ಇದ್ದುದು ಪತ್ತೆಯಾಯಿತು.
ಬಂಧಿತ ಇಮ್ರಾನ್ ಇತರ ಸುಮಾರು 10ರಿಂದ 12 ಮಂದಿಯ ಮುಸ್ಲಿಂ ಮುಲ್ಲಾ ಗಳ ಗುಂಪಿನೊಂದಿಗೆ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಬಂದಿದ್ದ. ವಕ್ಫ್ ಬೋರ್ಡ್ ಸಿಬಂದಿಗಳ ಮಾಸಿಕ ವೇತನ ಹೆಚ್ಚಿಸಬೇಕೆಂಬ ಬೇಡಿಕೆಯ ಬಗ್ಗೆ ಕೇಜ್ರಿವಾಲ್ ಜತೆಗೆ ಚರ್ಚಿಸಲು ಆತ ಸಂದರ್ಶನವಾಕಾಶ ಕೋರಿದ್ದ ಎಂದು ತಿಳಿದು ಬಂದಿದೆ.
ಸಜೀವ ಗುಂಡಿನ ಬಗ್ಗೆ ವಿಚಾರಿಸಿದ ಪೊಲೀಸರಲ್ಲಿ ಇಮ್ರಾನ್, “ಈ ಗುಂಡು ಮಸೀದಿಯ ಡೊನೇಶನ್ ಬಾಕ್ಸ್ ನಲ್ಲಿ ಕಂಡು ಬಂದಿತ್ತು. ಅದನ್ನು ನಾನು ನನ್ನ ಚೀಲದಲ್ಲಿ ಇರಿಸಿಕೊಂಡಿದ್ದೆ; ಬಳಿಕ ಅದನ್ನು ಮರೆತೇ ಬಿಟ್ಟಿದ್ದ” ಎಂದು ಉತ್ತರಿಸಿದ್ದಾನೆ.
ಶಸ್ತ್ರಾಸ್ತ್ರ ಕಾಯಿದೆಯಡಿ ಆರೋಪಿ ಮುಲ್ಲಾ ಇಮ್ರಾನ್ನನ್ನು ಪೊಲೀಸರು ಬಂಧಿಸಿದ್ದಾರೆ.