ಬಾಗಲಕೋಟೆ: ಆಕ್ರೋಶದಲ್ಲಿ ಬೆಳಗಾವಿ ಸುವರ್ಣಸೌಧದ ಬೀಗ ಹೊಡೆದ ರೈತರನ್ನು ಗೂಂಡಾಗಳು ಎಂದ ನೀವು ಹೆಗಡೆ ಕಾಲದಲ್ಲಿ ವಿಧಾನಸೌಧಕ್ಕೆ ಬೀಗ ಹೊಡೆಸಿದ್ದ ನಿಮ್ಮ ತಂದೆ ಎಚ್ಡಿ ದೇವೆಗೌಡರಿಗೆ ಏನೆಂದು ಕರೆಯುತ್ತೀರಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ರೈತ ಮಹಿಳೆಯೊಬ್ಬರು ಸವಾಲ್ ಹಾಕಿದ್ದಾರೆ. ಅಲ್ಲದೇ ನಮಗೆ ಗೂಂಡಾಗಳು ಎಂದು ಕರೆದ ನಿಮಗೆ ದೇವೆಗೌಡರು ವಿಧಾನಸೌಧಕ್ಕೆ ಬೀಗ ಹೊಡೆಸಿದ್ದ ಘಟನೆ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಇದೇ ನವೆಂಬರ್.25 ರಂದು ಮುಧೋಳದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ್ದ ರೈತ ಮಹಿಳಾ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅವರು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 1994 ರಲ್ಲಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಮುಖ್ಯಮಂತ್ರಿಯಾಗಬೇಕೆಂಬ ಆಸೆಗೆ ಮಾಜಿ ಪ್ರಧಾನಿ ದೇವೆಗೌಡರು ವಿಧಾನಸೌಧಕ್ಕೆ ಬೀಗ ಹೊಡೆಸಿದ್ದರು. ಪ್ರತಿಭಟನಾನಿರತ ರೈತ ಹೋರಾಟಗಾರರನ್ನು ಗೂಂಡಾ, ದರೋಡೆಕಾರರು ಎಂದ ನಿಮಗೆ ಹಿಂದಿನ ಘಟನೆ ನೆನಪಾಗಲಿಲ್ಲವೇ ಎಂದು ಎಚ್ಡಿ ಕುಮಾರಸ್ವಾಮಿಯವರಿಗೆ ತಪರಾಕಿ ಬಾರಿಸಿದರು.
ಇನ್ನು ರೈತ ಮಹಿಳಾ ಹೋರಾಟಗಾರ್ತಿ ಸಿಎಂ ವಿರುದ್ಧ ನಡೆಸಿರುವ ವಾಗ್ದಾಳಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಸದ್ಯ ಯಾರೋ ಸಿಎಂಗೆ ಸವಾಲ್ ಹಾಕಿದ ಮಹಿಳಾ ಹೋರಾಟಗಾರ್ತಿ ವಿಡಿಯೋ ಹರಿ ಬಿಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದೀಗ ಮಹಿಳೆ ಎತ್ತಿರುವ ಪ್ರಶ್ನೆಯ ಸುತ್ತ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ವಿಡಿಯೋ ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಆಗಿದೆ.
ಈ ಹಿಂದೆಯೂ ಬಿಜೆಪಿ ಮುಖಂಡ, ಡಿಸಿಎಂ ಆರ್ ಅಶೋಕ್ ಅವರು, ಮುಖ್ಯಂತ್ರಿಗಳಿಗೆ ಇದೇ ಪ್ರಶ್ನೆಯನ್ನು ಕೇಳಿದ್ದರು. ಈ ಸಂದರ್ಭದಲ್ಲಿ ರೈತರನ್ನು ಗೂಂಡಾಗಳು ಎಂದು ಕರೆದು ಇತಿಹಾಸದಲ್ಲಿ ಉಳಿದು ಬಿಟ್ಟಿರಿ, ರಾಮಕೃಷ್ಣ ಹೆಗಡೆ ಅವರಿಗೆ ಚಪ್ಪಲಿಯಲ್ಲಿ ಹೊಡೆಸಿದ ನಿಮ್ಮನ್ನು ಏನೆನ್ನಬೇಕು ಎಂದು ಕಿಡಿಕಾರಿದ್ದರು. ಇನ್ನು ವಿಧಾನಸೌಧಕ್ಕೆ ಕಲ್ಲುಗಳಲ್ಲಿ ಹೊಡೆದವರು ನೀವು. ಅಧಿಕಾರ ಶಾಶ್ವತ ಅಲ್ಲ, ಮೀಸೆ ತಿರುವಿ ಮೆರೆದವರೆಲ್ಲ ಏನಾದ್ರೂ ಅಂತ ಗೊತ್ತಿದೆ ಎಂದಿದ್ದರು.
ರೈತ ಮಹಿಳೆ ಮುಖ್ಯಮಂತ್ರಿ ಅವರನ್ನ ನಾಲಾಯಕ್ ಎಂದು ಕರೆದಿದ್ದಾರೆ. ಇದರರ್ಥ ಸಿಎಂ ಸ್ಥಾನಕ್ಕೆ ನೀವು ಲಾಯಕ್ ಅಲ್ಲ, ಜೊತೆಗೆ ನಿಮಗೆ ಅಷ್ಟು ಸಾಮರ್ಥ್ಯವೂ ಇಲ್ಲ. ಓರ್ವ ಮಹಿಳೆಗೆ ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ? ಎಂದು ಕೇಳುತ್ತೀರಿ ಇದು ಸರಿಯೇ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಪ್ರಶ್ನಿಸಿದರು. ಐದು ತಿಂಗಳಿನಿಂದ ರೈತರ ಸಾಲಮನ್ನಾ ಮಾಡುತ್ತಲೇ ಬಂದಿದ್ದೀರಿ. ಇಲ್ಲಿಯವರೆಗೂ ಒಂದು ನಯಾಪೈಸೆ ಕೂಡ ಮನ್ನಾ ಆಗಿಲ್ಲ. ರೈತರ ಸಾಲ ಮನ್ನಾ ಮಾಡೋದಕ್ಕೆ ನಿಮ್ಮಲ್ಲಿ ಹಣ ಇಲ್ಲವೇ? ಎಂದು ಜರೆದಿದ್ದರು.