ಅಂಬರೀಶ್ ಅವರ ಹೆಸರಿನಲ್ಲಿ ಸದ್ಯದಲ್ಲೇ ಸ್ಮಾರಕ ನಿರ್ಮಾಣ

ಬೆಂಗಳೂರು,ನ.26- ಕನ್ನಡ ಚಿತ್ರರಂಗ ಹಾಗೂ ಕನ್ನಡ ನಾಡಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಅಂಬರೀಶ್ ಅವರ ಹೆಸರಿನಲ್ಲಿ ಸದ್ಯದಲ್ಲೇ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದೆ.

ಅವರ ಅಂತ್ಯಕ್ರಿಯೆ ನಡೆಯಲಿರುವ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ವರನಟ ಡಾ.ರಾಜ್‍ಕುಮಾರ್ ಹೆಸರಿನಲ್ಲಿ ನಿರ್ಮಾಣವಾಗಿರುವ ಸ್ಮಾರಕದ ಮಾದರಿಯಲ್ಲೇ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಸ್ಮಾರಕ ತಲೆ ಎತ್ತಲಿದೆ.

ಮಂಡ್ಯದಲ್ಲಿ ಇದನ್ನು ಖಚಿತಪಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳೆದ ನಾಲ್ಕು ದಶಕಗಳಿಂದ ಅಂಬರೀಶ್ ನಾಡುನುಡಿ, ನೆಲಜಲ ಸೇರಿದಂತೆ ಕನ್ನಡ ಚಿತ್ರರಂಗ ಹಾಗೂ ಕರುನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಅಮೂಲ್ಯ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸ್ಮಾರಕ ನಿರ್ಮಾಣ ಮಾಡಲಿದೆ ಎಂದು ಹೇಳಿದರು.

ಶೀಘ್ರದಲ್ಲೇ ಅಂಬರೀಶ್ ಹೆಸರಿನಲ್ಲಿ ಹೊಸ ಯೋಜನೆಗಳನ್ನು ಜಾರಿ ಮಾಡಲಾಗುವುದು. ಸ್ಮಾರಕ ನಿರ್ಮಾಣ ಮಾಡುವ ಸಂಬಂಧ ಕ್ರಿಯಾ ಯೋಜನೆಯನ್ನು ರೂಪಿಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಸದ್ಯದಲ್ಲೇ ಇದಕ್ಕೆ ಅಂತಿಮ ಸ್ಪರ್ಶ ನೀಡಲಿದ್ದೇವೆ ಎಂದು ತಿಳಿಸಿದರು.

ಅಂಬರೀಶ್ ಕೇವಲ ಚಿತ್ರನಟರಾಗಿ ನೋಡದೆ ಅವರೊಬ್ಬ ಮೇರು ವ್ಯಕ್ತಿತ್ವದ ಮಾನವತವಾದಿ. ರಾಜ್ಯದ ಯಾವುದೇ ವಿಷಯಗಳಿದ್ದರೂ ಮುಂಚೂಣಿ ಯಲ್ಲಿರುತ್ತಿದ್ದರು. ಕಷ್ಟ ಎಂದವರಿಗೆ ಕೈಲಾದ ಸೇವೆ ಸಲ್ಲಿಸಿದ್ದಾರೆ. ಕರುನಾಡು ಅವರನ್ನು ಎಂದಿಗೂ ಮರೆಯುವುದಿಲ್ಲ ಎಂದು ಭಾವುಕವಾಗಿ ನುಡಿದರು.

ಕೃತಜ್ಞತೆ:
ಅಂಬರೀಶ್ ಅವರ ಅಂತಿಮ ದರ್ಶನದ ವೇಳೆ ಮಂಡ್ಯ ಜನತೆ ತೋರಿದ ಪ್ರೀತಿ, ಸಂಯಮ ಹಾಗೂ ಸಹನೆಗೆ ಕುಮಾರಸ್ವಾಮಿ ಅವರು ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ನಿನ್ನೆ ಸಂಜೆಯಿಂದಲೇ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಅಗಲಿದ ನಾಯಕನ ಅಂತಿಮ ದರ್ಶನ ಪಡೆದಿದ್ದಾರೆ. ಯಾರೊಬ್ಬರೂ ಕೂಡ ಸಹನೆ ಕಳೆದುಕೊಳ್ಳದೆ ಶಾಂತಿ ರೀತಿಯಲ್ಲಿ ವರ್ತಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದೀರಿ. ಇದಕ್ಕಾಗಿ ನಾನು ಸರ್ಕಾರದ ಪರವಾಗಿ ಅಭಾರಿಯಾಗಿದ್ದೇನೆ ಎಂದರು.

ಎಳನೀರು ವ್ಯಾಪಾರಿಯೊಬ್ಬ ಅಂಬರೀಶ್ ಅಗಲಿಕೆಯಿಂದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಮನಸಿಗೆ ಅತ್ಯಂತ ಆಘಾತವನ್ನುಂಟು ಮಾಡಿದೆ. ದಯವಿಟ್ಟು ಅಭಿಮಾನಿಗಳು ಇಂಥ ಹುಚ್ಚು ಕೆಲಸಕ್ಕೆ ಕೈ ಹಾಕಬೇಡಿ. ಇಂಥ ಯೋಚನೆಗೂ ಮುನ್ನ ನಿಮ್ಮ ತಂದೆತಾಯಿ, ಅಕ್ಕತಂಗಿಯರನ್ನು ಒಮ್ಮೆ ನೆನೆಸಿಕೊಳ್ಳಿ. ಅಭಿಮಾನವಿದ್ದರು ಈ ರೀತಿ ವರ್ತಿಸಬಾರದು.

ಜಿಲ್ಲೆಯ ಜನತೆ ಈವರೆಗೂ ತೋರಿದ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾಗದು. ಕಳೆದವಾರವಷ್ಟೇ ನನಗೆ ಫೆÇೀನ್ ಮಾಡಿ ಆರೋಗ್ಯದ ಬಗ್ಗೆ ಹುಷಾರ್ ಕಣೊ, ರಾಜ್ಯಕ್ಕೆ ನಿನ್ನ ಅವಶ್ಯಕತೆ ಇದೆ ಎಂದಿದ್ದರು.

ನನ್ನ ಹಿರಿಯಣ್ಣನಂತಿದ್ದ ಅವರ ಅಗಲಿಕೆ ಇಷ್ಟು ಬೇಗ ಆಗಲಿದೆ ಎಂದು ನಾನು ಅಂದುಕೊಂಡಿರಲಿಲ್ಲ. ವಿಧಿ ಬರಹದ ಮುಂದೆ ನಾವೆಲ್ಲರೂ ತೃಣಕ್ಕೆ ಸಮಾನ. ಬದುಕಿರುವವರೆಗೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿ ಎಲ್ಲರ ಹೃದಯದಲ್ಲೂ ಶಾಶ್ವತವಾಗಿ ನೆಲೆಯೂರಿದ್ದಾರೆ.

ಶಾಂತಿಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಲು ಎಲ್ಲರೂ ಸಹಕಾರ ನೀಡಬೇಕು. ಈವರೆಗೂ ತೋರಿದ ಪ್ರೀತಿ, ವಿಶ್ವಾಸಕ್ಕೆ ಮತ್ತೊಮ್ಮೆ ನಾನು ಅಭಾರಿಯಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ