ಅತಿ ವೇಗದ ಕಾರು ಚಾಲನೆ ಅಂಬರೀಶ್ ಗೆ ನೆಚ್ಚಿನ ಸಂಗತಿ

ಬೆಂಗಳೂರು, ನ.25-ಬಾರದ ಲೋಕಕ್ಕೆ ತೆರಳಿದ ಖ್ಯಾತ ಅಭಿನೇತ, ಪಕ್ಷಾತೀತ-ಜಾತ್ಯತೀತ ಕುಚುಕು ಗೆಳೆಯ ಅಂಬರೀಶ್ ವ್ಯಕ್ತಿತ್ವ ಅತ್ಯಂತ ವರ್ಣರಂಜಿತವಾದುದು. ಸವಾಲುಗಳನ್ನು ಸ್ವೀಕರಿಸಿ ಅದನ್ನು ಛಲದಿಂದ ಗೆಲ್ಲುವ ಸಾಹಸ ಮನೋಭಾವವೂ ಸೋಲಿಲ್ಲದ ಸರದಾರನಲ್ಲಿ ಇತ್ತು. ಇದಕ್ಕೊಂದು ಸ್ಪಷ್ಟ ನಿದರ್ಶನವೂ ಇದೆ.

ಮೈಸೂರಿನ ಹಿರಿಯ ಕಾಂಗ್ರೆಸ್ ಧುರೀಣರಾಗಿದ್ದ್ತ ಮಾಜಿ ಸಚಿವ ದಿವಂಗತ ಅಜೀಜ್ ಸೇಠ್(ತನ್ವೀರ್ ಸೇಠ್ ಅವರ ತಂದೆ) ಮತ್ತು ಅಂಬರೀಶ್ ಆಪ್ತ ಗೆಳೆಯರಾಗಿದ್ದರು. ವಯಸ್ಸಿನಲ್ಲಿ ಹಿರಿಯರಾದ ಅಜೀಜ್ ಸೇಠ್ ಮತ್ತು ಅಂಬರೀಶ್ ಕಾರು ಪ್ರಿಯರಾಗಿದ್ದರು.ವೇಗದಲ್ಲಿ ಕಾರು ಚಾಲನೆ ಮಾಡುವುದು ಇವರಿಬ್ಬರಿಗೂ ಖುಷಿ ನೀಡುವ ಸಂಗತಿಯಾಗಿತ್ತು.
ಅಜೀಜ್ ಸೇಠ್ ಮೈಸೂರಿನಿಂದ ಬೆಂಗಳೂರಿಗೆ ಹೋಗುವಾಗ ಅನೇಕ ಸಂದರ್ಭಗಳಲ್ಲಿ ಅತಿವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು.ಆಗ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅತಿಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದ ಮೃತ್ಯುಕೂಪದ ಮಾರ್ಗವಾಗಿತ್ತು.ವೇಗವಾಗಿ ಕಾರು ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿಯೂ ಆಗಿತ್ತು.

ಒಮ್ಮೆ ಅಜೀಜ್ ಸೇಠ್ ತುರ್ತಾಗಿ ಬೆಂಗಳೂರಿಗೆ ತೆರಳಬೇಕಿತ್ತು. ಅವರೇ ಖುದ್ದಾಗಿ ಕಾರು ಚಾಲನೆ ಮಾಡಿಕೊಂಡು ಕೇವಲ 2 ಗಂಟೆ 10 ನಿಮಿಷದಲ್ಲಿ ರಾಜಧಾನಿ ತಲುಪಿದ್ದರು(ಮಿತಿ ವೇಗದಲ್ಲಿ 3.30 ಗಂಟೆ ಬೇಕಾಗುತ್ತಿತ್ತು). ತಮ್ಮ ಸವಾಲುಗಳಿಗೆ ಸದಾ ಪ್ರತಿಸ್ಪರ್ಧಿಯಂತಿದ್ದ ಆಪ್ತ ಮಿತ್ರ ಅಂಬರೀಶ್ ಅವರಿಗೆ ಈ ವಿಷಯ ತಿಳಿಸಲು ಅವರು ಬಯಸಿದ್ದರು.
ಆ ಸಂದರ್ಭದಲ್ಲಿ ಅಂಬರೀಶ್ ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್‍ನಲ್ಲಿದ್ದರು. ಅಲ್ಲಿಗೆ ಸ್ಥಿರ ದೂರವಾಣಿ ಮೂಲಕ ಅಂಬಿಯನ್ನು ಸಂಪರ್ಕಿಸಿದ ಸೇಠ್ ತಾವು ಕೇವಲ 2 ಗಂಟೆ 10 ನಿಮಿಷದಲ್ಲೇ ಬೆಂಗಳೂರನ್ನು ಸ್ವತಃ ತಾವೇ ಕಾರ್ ಡ್ರೈವ್ ಮಾಡಿಕೊಂಡು ತಲುಪಿದ್ದಾಗಿಯೂ ಈ ಸವಾಲು ಎದುರಿಸಲು ನಿನಗೆ ಖಂಡಿತಾ ಸಾಧ್ಯವಿಲ್ಲ ಎಂದು ರೆಬಲ್ ಸ್ಟಾರ್‍ನನ್ನು ಕೆಣಕಿದರು.

ಇದನ್ನು ಸವಾಲಾಗಿ ಸ್ವೀಕರಿಸಿದ ಅಂಬಿರೀಶ್ ಈಗ ನೀವು ಬೆಂಗಳೂರಿನಲ್ಲಿ ಎಲ್ಲಿದ್ದೀರಾ?ನಿಮ್ಮ ಗಡಿಯಾರದಲ್ಲಿ ಈಗ ಟೈಮ್ ಎಷ್ಟು?ನಾನು ಕೇವಲ ಎರಡೇ ಗಂಟೆಯಲ್ಲಿ ನೀವು ಇರುವ ಸ್ಥಳಕ್ಕೆ ಬರುತ್ತೇನೆ ನೋಡುತ್ತಿರಿ ಎಂದ ಫೆÇೀನ್ ಇಟ್ಟವರೇ ತಕ್ಕಣ ಕಾರು ಚಾಲನೆ ಮಾಡಿಕೊಂಡು ಕೇವಲ 2 ಗಂಟೆಗಳಲ್ಲಿ ಅಪಾಯಕಾರಿ ಹೆದ್ದಾರಿಯಲ್ಲಿ ವೇಗವಾಗಿ ಬಂದು ನಿಗದಿತ ಸಮಯಕ್ಕೆ ಸರಿಯಾಗಿ ಸೇಠ್ ಇದ್ದ ಸ್ಥಳವನ್ನು ತಲುಪಿದ್ದರು.ಗೆಳೆಯನ ಈ ಸಾಹಸ ಪ್ರವೃತ್ತಿಯನ್ನು ಅಜೀಜ್ ಸೇಠ್ ಕೊಂಡಾಡಿದರು.ಅವರಿಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ