ರೆಬೆಲ್ ಸ್ಟಾರ್ ನಿಧನ: ಶೋಕ ಸಾಗರದಲ್ಲಿ ಮುಳುಗಿದ ಸ್ಯಾಂಡಲ್‍ವುಡ್

ಬೆಂಗಳೂರು,ನ.25-ರೆಬೆಲ್ ಸ್ಟಾರ್ ಅಂಬರೀಶ್ ಅವರ ಪ್ರಾರ್ಥೀವ ಶರೀರದ ಅಂತ್ಯ ಸಂಸ್ಕಾರಕ್ಕೆ ಸ್ಯಾಂಡಲ್‍ವುಡ್ ಸೇರಿದಂತೆ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳ ದಂಡೇ ಆಗಮಿಸಿದೆ.

ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದ ಕಂಠೀರವ ಕ್ರೀಡಾಂಗಣ ಇಂದು ಶೋಕ ಸಾಗರದಲ್ಲಿ ಮುಳುಗಿತ್ತು.ಎಲ್ಲರ ಕಣ್ಣಲ್ಲೂ ಕಣ್ಣೀರಧಾರೆ ಹರಿಯುತ್ತಿತ್ತು. ಎಲ್ಲೆಡೆ ಅಂಬರೀಶ್ ಅಮರ್ ರಹೇ ಎಂಬ ಘೋಷ ವಾಕ್ಯ ಕೇಳಿಬರುತ್ತಿತ್ತು.

ಬೆಳಗ್ಗೆನಿಂದಲೇ ಕ್ರೀಡಾಂಗಣದತ್ತ ಜನಸಾಗರವೇ ಹರಿದುಬರುತ್ತಿತ್ತು.ಆಬಾಲವೃದ್ಧರಾದಿಯಾಗಿ ಎಲ್ಲ ವರ್ಗದ, ವಯಸ್ಸಿನ ಅಭಿಮಾನಿಗಳೂ ಅಲ್ಲಿ ನೆರೆದು ಅಂಬಿಯ ಗುಣಗಾನ ಮಾಡುತ್ತಿದ್ದುದು ಕಂಡುಬಂತು.ಹಿರಿಯ ನಟ-ನಟಿಯರು ಅಂತಿಮ ದರ್ಶನ ಸಲ್ಲಿಸಿ ಅಂಬರೀಶ್‍ರೊಂದಿಗಿನ ತಮ್ಮ ಒಡನಾಟ ನೆನೆದು ಕಣ್ಣೀರಿಡುತ್ತಿದ್ದರು.


ಸರತಿಸಾಲಿನಲ್ಲಿ ನಿಂತು ಅಂಬರೀಶ್ ಅವರಿಗೆ ಗೌರವ ಸಲ್ಲಿಸಲಾಗುತ್ತಿತ್ತು.ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ತುಮಕೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಜನ ತಂಡೋಪ ತಂಡವಾಗಿ ಬರುತ್ತಿದ್ದ ದೃಶ್ಯ ಕಂಡುಬಂತು.ಸುಡು ಬಿಸಿಲನ್ನು ಲೆಕ್ಕಿಸದೆ ಅಭಿಮಾನಿಗಳು ನೂರಾರು ಮೀಟರ್ ದೂರದ ಸಾಲಿನಲ್ಲಿ ನಿಂತು ನಮನ ಸಲ್ಲಿಸುತ್ತಿದ್ದರು.

ತಮಿಳು, ತೆಲುಗು, ಹಂದಿ ಸೇರಿದಂತೆ ಭಾರತೀಯ ಚಿತ್ರರಂಗದ ಹಿರಿಯರು ಆಗಮಿಸಿದ್ದರು. ಹಿರಿಯ ನಟರಾದ ರಜನೀಕಾಂತ್, ಶರತ್‍ಕುಮಾರ್ , ರಾಧಿಕಾ, ಲಕ್ಷ್ಮಿ, ಪ್ರಕಾಶ್ ರೈ, ಅಂಬಿಕಾ, ಶಿವರಾಜ್‍ಕುಮಾರ್, ಪುನೀತ್, ಯಶ್, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಸಾವಿರಾರು ನಟ-ನಟಿಯರು ಆಗಮಿಸಿ ಅಂಬರೀಶ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ತೆಲುಗು ಚಿತ್ರರಂಗದ ಮೇರುನಟರಾದ ಚಿರಂಜೀವಿ, ಮೋಹನ್‍ಬಾಬು ಅವರು ಅಂಬರೀಶ್ ಅವರ ಅಂತಿಮ ದರ್ಶನ ಪಡೆಯುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಕಂಡುಬಂತು. ಸುಮಲತಾ ಅವರನ್ನು ಸಮಾಧಾನಪಡಿಸಿದ ಈ ಇಬ್ಬರು ನಟರು ಬಹಳ ಹೊತ್ತು ಸ್ಥಳದಲ್ಲೇ ಇದ್ದು ಸಾಂತ್ವನ ಹೇಳಿದರು.
ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಎಲ್ಲಾ ಅಗತ್ಯ ವ್ಯವಸ್ಥೆ ಹಾಗೂ ಭದ್ರತೆಯನ್ನು ಒದಗಿಸಲಾಗಿತ್ತು.

ಅಂಬರೀಶ್ ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ಕೊಂಡೊಯ್ಯಲಾಗುತ್ತದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸರತಿ ಸಾಲಿನಲ್ಲಿ ನಿಂತಿದ್ದ ಅಭಿಮಾನಿಗಳು ಅಂಬಿ ಅವರ ದರ್ಶನ ಪಡೆಯಲು ಮುಗ್ಗಿಬಿದ್ದಿದ್ದರಿಂದ ನೂಕಾಟ, ತಳ್ಳಾಟ ಉಂಟಾಗಿತ್ತು. ಪೆÇಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಎಲ್ಲರಿಗೂ ದರ್ಶನದ ಅವಕಾಶ ನೀಡುವುದಾಗಿ ಹೇಳಿ ಸಮಾಧಾನಪಡಿಸಿದರು.

ಅಂತಿಮ ದರ್ಶನಕ್ಕಾಗಿ ಗಣ್ಯರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದರಿಂದ ಗಣ್ಯರಿಗೆ ಅಂಬಿ ಅವರ ಮುಖ ದರ್ಶನಕ್ಕೆ ಯಾವುದೇ ತೊಂದರೆ ಎದುರಾಗಲಿಲ್ಲ.
ಆದರೆ ಸರತಿ ಸಾಲಿನಲ್ಲಿ ನಿಂತು ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಕಾದು ನಿಂತಿದ್ದ ಅಭಿಮಾನಿಗಳು ಮತ್ತು ಸಾರ್ವಜನಿಕರು ದೂರದಿಂದಲೇ ಕೈಮುಗಿದು ಬೇಸರದಿಂದಲೇ ಹೊರನಡೆದ ದೃಶ್ಯ ಕಂಡುಬಂತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ