ರಾಜ್ಯಸಭೆಯ ಒಂದು ಸ್ಥಾನವನ್ನು ದಲಿತರಿಗೆ ನೀಡುವಂತೆ ನಿರ್ದೇಶಕ ಹಾಗೂ ಪರಿಶಿಷ್ಟ ಜಾತಿಯ ಹಿರಿಯ ವಕೀಲ ಅನಂತರಾಯಪ್ಪ ಮನವಿ
ಬೆಂಗಳೂರು, ಮಾ.8- ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ದಲಿತರಿಗೆ ನೀಡುವಂತೆ ಜಾಗೃತಿ ಚಲನಚಿತ್ರದ ನಿರ್ದೇಶಕ ಹಾಗೂ ಪರಿಶಿಷ್ಟ ಜಾತಿಯ ಹಿರಿಯ ವಕೀಲ ಅನಂತರಾಯಪ್ಪ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ಒಂದು ಸ್ಥಾನವನ್ನು ಗೆಲ್ಲುವ ಸ್ಥಿತಿಯಲ್ಲಿದ್ದು , ಕಾಂಗ್ರೆಸ್ ಪಕ್ಷ ಮೂರು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಜೆಡಿಎಸ್ ಪಕ್ಷಕ್ಕೆ ಸ್ವಂತ ಬಲದ ಮೇಲೆ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟು ಸಂಖ್ಯಾಬಲ ಇಲ್ಲ. ಆದರೆ ಯಾವ ಪಕ್ಷವೂ ದಲಿತರನ್ನು ಪರಿಗಣಿಸುವ ಸೂಚನೆಗಳು ಕಾಣುತ್ತಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅನಂತರಾಯಪ್ಪ ರಾಜಕೀಯ ಪಕ್ಷಗಳಿಗೆ ದಲಿತರ ವೋಟು ಬೇಕು ಆದರೆ ದಲಿತರಿಗೆ ಅಧಿಕಾರ ಕೊಡುವ ಮನಸ್ಸಿಲ್ಲ ಎಂದು ಟೀಕಿಸಿದ್ದಾರೆ.
ರಾಜಕೀಯ ಪಕ್ಷಗಳಲ್ಲಿ ರಾಜ್ಯಸಭಾ ಸದಸ್ಯರಾಗುವ ಅರ್ಹತೆಯುಳ್ಳ ದಲಿತ ನಾಯಕರಿಗೆ ಕೊರತೆ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ , ಆಂಜನೇಯ, ಮಾಜಿ ಸಚಿವೆ ಮೋಟಮ್ಮ , ಡಾ.ಎಲ್.ಹನುಮಂತಯ್ಯ ಮುಂತಾದವರಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ರೇವುನಾಯಕ್ ಬೆಳಮಗಿ, ಡಿ.ಎಸ್.ವೀರಯ್ಯ ಮುಂತಾದವರಿದ್ದಾರೆ. ಇವರ ಪೈಕಿ ಯಾರನ್ನಾದರೂ ಆಯ್ಕೆ ಮಾಡಬೇಕೆಂದು ಅನಂತರಾಯಪ್ಪ ಮನವಿ ಮಾಡಿದ್ದಾರೆ.