ಬೆಂಗಳೂರು,ನ.24- ಕಾರ್ಪೊರೇಟ್ ಕಂಪನಿಗಳು ರಾಜ್ಯದಲ್ಲಿ ಆರೋಗ್ಯ ಸೇವೆ ನೀಡಲು ಹೆಚ್ಚು ಆಸ್ಪತ್ರೆಗಳನ್ನು ನಿರ್ಮಿಸಿದರೆ ಕರ್ನಾಟಕ ಹೆಲ್ತ್ ಟ್ಯೂರಿಸಂ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಶಿವಾಜಿನಗರದ ಎಚ್.ಕೆ.ಪಿ.ರಸ್ತೆಯಲ್ಲಿರುವ ಚರ್ಚ್ ಆಫ್ ಸೌತ್ ಇಂಡಿಯ ಆಸ್ಪತ್ರೆಯ 125ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕ್ರಿಶ್ಚಿಯನ್ ಮಿಷನರಿಗಳು ಜಗತ್ತಿನಾದ್ಯಂತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ವಿಶ್ವದ ಯಾವುದೇ ಮೂಲೆಗೆ ತೆರಳಿದರೂ ಅಲ್ಲಿ ಮಿಷನರಿಗಳ ಶಿಕ್ಷಣ ಸಂಸ್ಥೆ ಅಥವಾ ಆಸ್ಪತ್ರೆ ಇದ್ದೇ ಇರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದಲೂ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಬಡವರ ಸೇವೆ ಮಾಡುತ್ತಿರುವ ಮಿಷನರಿಗಳ ಕಾರ್ಯ ಶ್ಲಾಘನೀಯ. ಕರ್ನಾಟಕದಲ್ಲಿಯೂ ಸಾಕಷ್ಟು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ತೆರೆದು ಸಮಾಜದ ಸೇವೆಯಲ್ಲಿ ತೊಡಗಿದ್ದಾರೆ.ಈ ಮೂಲಕ ರಾಜ್ಯದ ಅಭಿವೃದ್ಧಿಗೆ ಮಿಷನರಿಗಳು ತಮ್ಮದೇ ಆದ ಕೊಡುಗೆ ನೀಡಿವೆ ಎಂದು ಹೇಳಿದರು.
ಕರ್ನಾಟಕ ಆರೋಗ್ಯ ಸೇವೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಹಲವು ಅತ್ಯುತ್ತಮ ಆಸ್ಪತ್ರೆಗಳು, ವೈದ್ಯರು ರಾಜ್ಯದಲ್ಲಿದ್ದಾರೆ. ಕಾರ್ಪೊರೇಟ್ ಕಂಪನಿಗಳು ಸಿಎಸ್ಆರ್ ನಿಧಿಯಿಂದ ಆಸ್ಪತ್ರೆಗಳನ್ನು ನಿರ್ಮಿಸುತ್ತಿವೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಕರ್ನಾಟಕ ಹೆಲ್ತ್ ಹಬ್ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.