ಬಿಜೆಪಿ ದಾಖಲಾತಿಯೊಂದಿಗೆ ಬಹಿರಂಗ ಚರ್ಚೆಗೆ ಬರಲಿ : ಬಂಡೆಪ್ಪ ಕಾಶಂಪುರ್

ಬೆಂಗಳೂರು, ನ.24- ನಮ್ಮದು ನಗದು ಸರ್ಕಾರ, ಉದ್ರಿ (ಸಾಲ) ಸರ್ಕಾರ ಅಲ್ಲ. ಬಿಜೆಪಿಯವರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ದಾಖಲಾತಿಯೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಸವಾಲು ಹಾಕಿದ್ದಾರೆ.

ಸಚಿವ ಸಂಪುಟ ಉಪಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿ ಕುರಿತು ಮಾಹಿತಿ ನೀಡಿ, ಬಿಜೆಪಿಯವರ ಆರೋಪಗಳಿಗೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯವರಿಗೆ ಮಾತನಾಡಲು ಸರಿಯಾದ ವಿಷಯಗಳು ಸಿಕ್ಕಿಲ್ಲ. ಹಾಗಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಸಾಲ ಮನ್ನಾದಿಂದಾಗಿ 22 ಲಕ್ಷ ರೈತರಿಗೆ ಅನುಕೂಲವಾಗಿದೆ. ಅವರ ಸರ್ಕಾರ 5ಸಾವಿರ ಕೋಟಿ ಬಿಡುಗಡೆ ಮಾಡಿತ್ತು.ನಮ್ಮ ಸರ್ಕಾರ 5 ತಿಂಗಳಲ್ಲಿ ಮೂರೂವರೆ ಸಾವಿರ ಕೋಟಿ ಬಿಡುಗಡೆ ಮಾಡಿದೆ.ಬಾಕಿ 1300 ಕೋಟಿ ರೂ.ಇನ್ನೆರಡು ಮೂರು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

ಸಹಕಾರ ಸಂಘಗಳಲ್ಲಿ ಸಾಲ ಪಡೆದವರಿಗೆ ಈವರೆಗೂ ಒಂದು ನೋಟೀಸ್ ಕೂಡ ಹೋಗಿಲ್ಲ. ಸಾಲ ಮನ್ನಾದ ಬಾಬ್ತು ಎಲ್ಲಾ ಹಣವನ್ನು ಬಿಡುಗಡೆ ಮಾಡಿದ್ದೇವೆ. ಕೆಲವು ಬಿಲ್‍ಗಳ ತೊಂದರೆಯಿಂದಾಗಿ ಅಲ್ಪಸ್ವಲ್ಪ ಹಣ ಬಾಕಿ ಉಳಿದಿರುವುದು ಹೊರತುಪಡಿಸಿ ಸಂಪೂರ್ಣವಾಗಿ ಸಾಲ ಮನ್ನಾ ಹಣವನ್ನು ಬಿಡುಗಡೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ರೈತರಿಗೆ ಹೊಸ ಸಾಲ ನೀಡಲು ತೊಂದರೆಯಾಗದಂತೆ ಕ್ರಮಕೈಗೊಂಡಿದ್ದೇವೆ. ನಮ್ಮದು ಸಾಲದ ಸರ್ಕಾರವಲ್ಲ, ನಗದಿನ ಸರ್ಕಾರ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯ ಇತರೆ ನಾಯಕರು ಮಾಡುತ್ತಿರುವ ಆರೋಪಗಳು ಶುದ್ಧ ಸುಳ್ಳು.ಅವರ ಬಳಿ ದಾಖಲೆಗಳಿದ್ದರೆ ಚರ್ಚೆಗೆ ಬರಲಿ, ವಿಧಾನಸಭೆ ಅಧಿವೇಶನದಲ್ಲೂ ಚರ್ಚಿಸಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಬಡವರ ಬಂಧು ಯೋಜನೆ ಬಜೆಟ್‍ನಲ್ಲಿ ಘೋಷಿಸಿ ನಾಲ್ಕೈದು ತಿಂಗಳಷ್ಟೇ ಆಗಿದೆ.ಈಗಾಗಲೇ ಅದನ್ನು ನಾವು ಜಾರಿಗೆ ತಂದಿದ್ದೇವೆ. ಉದ್ಯಮ ಶೀಲತೆಗೆ ಬೆಂಬಲ ನೀಡುವ ಕಾಯಕ ಯೋಜನೆಯನ್ನು ಬೆಳಗಾವಿಯಲ್ಲಿ ಸುಮಾರು ಒಂದು ಸಾವಿರ ಫಲಾನುಭವಿಗಳನ್ನು ಸಮಾವೇಶಗೊಳಿಸಿ ಉದ್ಘಾಟಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಕಾಂಗ್ರೆಸ್ ಶಾಸಕ ಸತೀಶ್ ಜಾರಕಿ ಹೊಳಿ ಅವರು ಸರ್ಕಾರ ಟೇಕಾಫ್ ಆಗಿಲ್ಲ ಎಂದು ನೀಡಿರುವ ಹೇಳಿಕೆ ಅವರ ಕ್ಷೇತ್ರಕ್ಕೆ ಸೀಮಿತವಾಗಿರಬಹುದು.ರಾಜ್ಯದಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ರೈತರ ಸಾಲ ಮನ್ನಾ ವಿಷಯದಲ್ಲಿ ಸರ್ಕಾರ ಬದ್ಧವಾಗಿದೆ. ಬೆಳಗಾವಿಯಲ್ಲಿ ಆಕ್ಸಿಸ್ ಬ್ಯಾಂಕ್ ರೈತರಿಗೆ ಬಂಧನದ ವಾರೆಂಟ್ ಜಾರಿಗೊಳಿಸಿದಾಗ ಮುಖ್ಯಮಂತ್ರಿಯಾದಿಯಾಗಿ ಸ್ಥಳೀಯ ಜಿಲ್ಲಾಧಿಕಾರಿ ಸೇರಿ ಎಲ್ಲರೂ ರೈತರ ಬೆಂಬಲಕ್ಕೆ ನಿಂತರು.ಈ ರೀತಿಯ ಸ್ಪಂದನೆ ಯಾರೂ ಮಾಡುವುದಿಲ್ಲ. ಅದು ಕುಮಾರಸ್ವಾಮಿಯವರ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೊಟೇಲ್‍ನಲ್ಲಿ ಕುಳಿತು ಡೀಲ್ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿಯವರ ನಡವಳಿಕೆ ಇಡೀ ರಾಜ್ಯಕ್ಕೆ ಗೊತ್ತಿದೆ.ಯಡಿಯೂರಪ್ಪ ಅವರ ಉಪದೇಶ ಬೇಕಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯದ ಸಾರಿಗೆ ಮಾರ್ಗಗಳ ರಾಷ್ಟ್ರೀಕರಣಕ್ಕೆ ಅಧ್ಯಯನ ವರದಿ ನೀಡಲು ನನ್ನನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ನಿನ್ನೆ ನಾನು ಈ ಬಗ್ಗೆ ಸಭೆ ನಡೆಸಿದ್ದೇನೆ. ಶೀಘ್ರವೇ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದು ಬಂಡೆಪ್ಪ ಕಾಶಂಪುರ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ