ನಕಲಿ ಪತ್ರಕರ್ತರ ಹಾವಳಿ

ಬೆಂಗಳೂರು, ನ.23- ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ನಕಲಿ ಪತ್ರಕರ್ತರ ಸೋಗಿನಲ್ಲಿ ಬಂದು ಅಮಾಯಕ ಜನರಿಂದ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆಗಳನ್ನು ಒತ್ತಾಯಪೂರ್ವಕವಾಗಿ ಪಡೆದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಕಬ್ಬನ್‍ಪಾರ್ಕ್ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ದಿನನಿತ್ಯದಂತೆ ಜನಸಾಮಾನ್ಯರು ಮುಖ್ಯಮಂತ್ರಿಗಳ ಭೇಟಿಗಾಗಿ ಕಾಯುತ್ತಿದ್ದರು. ನ.22ರಂದು ಅದೇ ವೇಳೆಗೆ ಅಲ್ಲಿಗೆ ಬಂದ ಮೂರು ಜನ (ಇಬ್ಬರು ಯುವತಿಯರು, ಓರ್ವ ಯುವಕ) ಅಲ್ಲಿದ್ದ ಅಂಗವಿಕಲರು, ವೃದ್ಧರು, ರೈತರನ್ನು ಒತ್ತಾಯಪೂರ್ವಕವಾಗಿ ಮಾತನಾಡಿಸಿ ಮುಖ್ಯಮಂತ್ರಿಗಳ ವಿರುದ್ಧ ಅಪಪ್ರಚಾರದ ಹೇಳಿಕೆ ನೀಡುವಂತೆ ಪ್ರಚೋದಿಸಿರುತ್ತಾರೆ.

ಅಲ್ಲದೆ, ಗೃಹ ಕಚೇರಿ ಕೃಷ್ಣಾದಲ್ಲಿ ಪೆÇಲೀಸ್ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿಕೆ ಕೊಡಿ ಎಂದು ಅಮಾಯಕರನ್ನು ಪೀಡಿಸುತ್ತಿದ್ದುದು ಸ್ಥಳದಲ್ಲಿದ್ದ ಪೆÇಲೀಸರಿಗೂ ಈ ಕುರಿತು ಅನುಮಾನಗಳು ಬಂದು ಪ್ರಶ್ನಿಸಲು ಮುಂದಾಗುತ್ತಿದ್ದಾರೆಂಬುದನ್ನು ಅರಿತು ಅವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ರಾಜಾರೋಷವಾಗಿ ಸಿಎಂ ಗೃಹ ಕಚೇರಿ ಕೃಷ್ಣಾ ಸುತ್ತ ಓಡಾಟ ನಡೆಸುತ್ತಿರುವುದು ಮುಖ್ಯಮಂತ್ರಿಗಳ ಭದ್ರತೆಗೆ ಅಪಾಯ ತರುವಂತಹ ವಿಚಾರವಾಗಿದೆ. ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಮಸಿ ಬಳಿಯುವ ಉದ್ದೇಶದಿಂದ ಈ ಕೃತ್ಯ ನಡೆಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇದಕ್ಕೆ ಸಂಬಂಧಿಸಿದ ವಿಡಿಯೋ ಸಮೇತ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ