ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್​ನಲ್ಲಿ ಭಾರತ ತಂಡ ಔಟ್; ಆಂಗ್ಲರಿಗೆ ಶರಣಾದ ಕೌರ್ ಪಡೆ

ಆಂಟಿಗುವಾ: ಟಿ20 ಮಹಿಳಾ ವಿಶ್ವಕಪ್​ನ ಗ್ರೂಪ್ ಸ್ಟೇಜ್​ನಲ್ಲಿ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ವನಿತೆಯರು ಆಘಾತಕಾರಿ ಸೋಲನುಭವಿಸಿದರು. ನಾರ್ಥ್ ಸೌಂಡ್​ನ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಎದುರು ಭಾರತೀಯರು ಮಂಡಿಯೂರಿದರು. ಭಾರತ ಮಹಿಳಾ ತಂಡ ಗಳಿಸಿದ 112 ರನ್ ಮೊತ್ತಕ್ಕೆ ಪ್ರತಿಯಾಗಿ ಆಂಗ್ಲರ ಪಡೆಯು 8 ವಿಕೆಟ್ ಹಾಗೂ 17 ಬಾಲ್ ಕೈಲಿರುಂತೆಯೇ ಗೆಲುವಿನ ಗುರಿ ಮುಟ್ಟಿತು. ಇದರೊಂದಿಗೆ ಫೈನಲ್ ತಲುಪಿದ ಇಂಗ್ಲೆಂಡ್ ವನಿತೆಯರು ಟಿ20 ಚಾಂಪಿಯನ್​ಪಟ್ಟಕ್ಕಾಗಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತೀಯ ಮಹಿಳಾ ತಂಡವು ಉತ್ತಮ ಆರಂಭ ಪಡೆಯಿತು. ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗೆಸ್ ಮತ್ತು ನಾಯಕಿ ಹರ್ಮಾನ್​ಪ್ರೀತ್ ಕೌರ್ ಉತ್ತಮವಾಗಿ ಆಡಿದರು. ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದ್ದ ಭಾರತ ತಂಡ 14ನೇ ಓವರ್​ನಿಂದ ದಿಢೀರ್ ಪತನಕ್ಕೆ ಅಡಿಯಿಟ್ಟಿತು. ಭಾರತೀಯರು ಕೇವಲ 112 ರನ್​ಗೆ ಆಲೌಟ್ ಆಯಿತು.

ಅಲ್ಪ ಮೊತ್ತದ ಗುರಿ ಹೊತ್ತ ಇಂಗ್ಲೆಂಡ್ ಮಹಿಳಾ ತಂಡ 24 ರನ್ನಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಾಗ ರೋಚಕ ಹಣಾಹಣಿಯ ಸಾಧ್ಯತೆ ಕಾಣುತ್ತಿತ್ತು. ಆದರೆ, ಆಮಿ ಜೋನ್ಸ್ ಮತ್ತು ನಟಾಲೀ ಸ್ಕೈವರ್ ಅವರು ಸಮಯೋಚಿತ ಪ್ರದರ್ಶನ ನೀಡಿ ಭಾರತಕ್ಕಿದ್ದ ಸಣ್ಣ ಗೆಲುವಿನ ಆಸೆಗೂ ತಣ್ಣೀರೆರಚಿದರು. ಗ್ರೂಪ್ ಸ್ಟೇಜ್​ನಲ್ಲಿ ಆಸ್ಟ್ರೇಲಿಯಾವನ್ನೂ ಸೋಲಿಸಿದ್ದ ಭಾರತದ ಮಹಿಳೆಯರು ಸೆಮಿಫೈನಲ್​ನಲ್ಲಿ ಇಷ್ಟು ಹೀನಾಯ ಸೋಲನುಭವಿಸುವ ನಿರೀಕ್ಷೆ ಇರಲಿಲ್ಲ.
ನ. 25ರಂದು ಫೈನಲ್ ಪಂದ್ಯ ನಡೆಯಲಿದ್ದು, ಪ್ರಶಸ್ತಿಗಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ನಿನ್ನೆ ನಡೆದ ಮೊದಲ ಸೆಮಿಫೈನಲ್​​ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಮಹಿಳಾ ಪಡೆಯನ್ನು ಆಸ್ಟ್ರೇಲಿಯನ್ನರು ಬರೋಬ್ಬರಿ 71 ರನ್ನುಗಳಿಂದ ಬಗ್ಗುಬಡಿದಿದ್ದರು.

ಸ್ಕೋರು ವಿವರ:
ಭಾರತ ಮಹಿಳಾ ತಂಡ 19.3 ಓವರ್ 112 ರನ್ ಆಲೌಟ್
(ಸ್ಮೃತಿ ಮಂಧಾನ 34, ಜೆಮಿಮಾ ರಾಡ್ರಿಗೆಸ್ 26, ಹರ್ಮಾನ್​ಪ್ರೀತ್ ಕೌರ್ 16, ತನಿಯಾ ಭಾಟಿಯಾ 11 ರನ್ – ಹೀದರ್ ನೈಟ್ 9/3, ಕರ್ಸ್ಟೀ ಗಾರ್ಡಾನ್ 20/2, ಸೋಫೀ ಎಕ್ಕಲ್​ಸ್ಟೋನ್ 22/2)

 

ಇಂಗ್ಲೆಂಡ್ ಮಹಿಳಾ ತಂಡ 17.1 ಓವರ್ 116/2
(ಅಮಿ ಜೋನ್ಸ್ ಅಜೇಯ 53, ನಟಾಲೀ ಸ್ಕಿವರ್ ಅಜೇಯ 52 ರನ್)

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ