ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು ಹಾಗೂ ಪತ್ರಕರ್ತರ ಫೋನ್ ಟ್ಯಾಪಿಂಗ್ ಆಗುತ್ತಿದೆಯಾ?

ಬೆಂಗಳೂರು: ರಾಜ್ಯದ ರಾಜಕೀಯ ಪಡಸಾಲೆಯ ಅನೇಕ ಪ್ರಮುಖರ ಚಟುವಟಿಕೆಗಳ ಮೇಲೆ ಕಳ್ಳಕಣ್ಣು, ಕಳ್ಳಗಿವಿ ಬಿದ್ದಿರುವ ಸುದ್ದಿಯೊಂದು ಕೇಳಿಬರುತ್ತಿದೆ. ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಫೋನ್ ಟ್ಯಾಪಿಂಗ್ ಆಗುತ್ತಿದೆಯಂತೆ. ಕೆಲ ಪತ್ರಕರ್ತರ ಫೋನ್ ಮೇಲೂ ಕಳ್ಳಗಿವಿ ನೆಟ್ಟಿದೆ ಎನ್ನಲಾಗಿದೆ.

ಎಂಬತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆಯವರು ಇದೇ ಫೋನ್ ಟ್ಯಾಪಿಂಗ್ ಹಗರಣದ ಮಸಿ ಮೆತ್ತಿಕೊಂಡು ಅಧಿಕಾರ ತ್ಯಜಿಸಿದ್ದರು. ಈಗ ಅಂಥದ್ದೇ ಫೋನ್ ಟ್ಯಾಪಿಂಗ್ ಹಗರಣ ಹೊರಬೀಳುವ ಸಾಧ್ಯತೆ ಇದೆ. ಗುಪ್ತಚರ ಹಾಗೂ ಗೃಹ ಇಲಾಖೆಯ ಒಳಹೊರಗನ್ನು ಬಲ್ಲಂತಹ ಆರ್. ಅಶೋಕ್ ಅವರೇ ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸರಕಾರವು ಫೋನ್ ಟ್ಯಾಪ್ ಮಾಡಿರುವುದು ನೂರಕ್ಕೆ ನೂರು ನಿಜ ಎಂದು ಬಿಜೆಪಿ ಮುಖಂಡರೂ ಆದ ಆರ್. ಅಶೋಕ್ ಹೇಳಿದ್ದಾರೆ.

ಮೈತ್ರಿ ಸರಕಾರದ ಭಾಗವಾಗಿರುವ ಜಾತ್ಯತೀತ ಜನತಾ ದಳದಿಂದ ಈ ದೂರವಾಣಿ ಕದ್ದಾಲಿಕೆ ನಡೆಯುತ್ತಿರುವ ಆರೋಪವಿದೆ. ಸರಕಾರವನ್ನು ಉಳಿಸಿಕೊಳ್ಳಲು ಹಾಗೂ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಫೋನ್ ಟ್ಯಾಪಿಂಗ್​ಗೆ ಮುಂದಾಗಿರಬಹುದೆನ್ನಲಾಗಿದೆ. ಮೀನಮೇಷ ಎಣಿಸದೆ ಜೆಡಿಎಸ್​ಜೊತೆ ಅಧಿಕಾರ ಹಂಚಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ಈಗ ಬುಡ ಕುಸಿಯುವಂಥ ಅನುಭವವಾಗುತ್ತಿದೆ. ಕೆಲ ಕಾಂಗ್ರೆಸ್ ನಾಯಕರಿಂದ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಬಹುದೆಂಬ ಭೀತಿಯಲ್ಲಿ ಸಿದ್ದರಾಮಯ್ಯ ಮೊದಲಾದ ಕಾಂಗ್ರೆಸ್ಸಿಗರ ಫೋನ್​ಗಳ ಮೇಲೆ ಸರಕಾರ ನಿಗಾ ಇರಿಸಿರುವಂತಿದೆ.
ಕೆಲ ದಿನಗಳ ಹಿಂದೆ ಯಡಿಯೂರಪ್ಪ ಅವರು ಹೆಚ್​ಡಿಕೆ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಮಾಡಿದ್ದರು. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ದೂರವಾಣಿ ಕದ್ದಾಲಿಕೆಯ ಆರೋಪವನ್ನು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಹೊರಿಸಿದ್ದವು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ