ಬೆಂಗಳೂರು,ನ.22- ಕನ್ನಡ ಜಾಗೃತಿ ವೇದಿಕೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳ್ಳಿಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇದೇ 25ರಂದು ಬೆಳಗ್ಗೆ 11.45ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ರಾಮಲಿಂಗರೆಡ್ಡಿ ನೆರವೇರಿಸಲಿದ್ದು, ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರು, ಕಲಾವಿದರು, ಹೋರಾಟಗಾರರು ಭಾಗವಹಿಸಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿರುವ ಸಾಧಕರಿಗೆ ಅಭಿನಂದನೆ ಸಮಾರಂಭವನ್ನು ಏರ್ಪಡಿಸಲಾಗಿz ಎಂದು ತಿಳಿಸಿದರು.
ಸಂಘಟನೆಯ 25 ವರ್ಷದ ಸಾಧನೆಯ ಕಿರುಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಜನಪದ ಕಲಾತಂಡಗಳು ಹಾಗೂ ವಿಶೇಷ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಕನ್ನಡ ಭಾಷೆಯ ಉಳಿವಿಗಾಗಿ, ಕನ್ನಡಿಗರ ಅಸ್ತಿತ್ವಕ್ಕಾಗಿ ಕಂಕಣ ತೊಟ್ಟು, ವೀರ ತಿಲಕವನ್ನಿಟ್ಟು ಕನ್ನಡವೇ ಕಾಯಕ, ಕರ್ನಾಟಕವೇ ಕೈಲಾಸ ಎಂಬ ಘೋಷ ವಾಕ್ಯವನ್ನು ಮೈಗೂಡಿಸಿಕೊಂಡು ಸದಾ ಕನ್ನಡ ಕೈಂಕರ್ಯದಲ್ಲಿ ತೊಡಗಿಸಿ ದೇಹ ಮಣ್ಣಿಗೆ, ಉಸಿರು ಕನ್ನಡಕ್ಕೆ ಎಂಬ ವಾಕ್ಯವನ್ನು ಹೃನ್ಮಗಳಲ್ಲಿ ನಾಟುವಂತೆ ಮಾಡುವ ಗುರಿಯನ್ನು ಹೊಂದಿರುವ ಸಂಘಟನೆ ನಮ್ಮದು ಎಂದರು.