ಬೆಂಗಳೂರು, ನ.21-ಬೀದಿ ಬದಿ ಹಾಗೂ ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಕಿರು ಸಾಲ ನೀಡುವ ರಾಜ್ಯ ಸರ್ಕಾರದ ಮಹತ್ವದ ಬಡವರ ಬಂಧು ಯೋಜನೆಗೆ ನಾಳೆ ಚಾಲನೆ ನೀಡಲಾಗುವುದು.
ಮೀಟರ್ ಬಡ್ಡಿ ದಂಧೆಕೋರರಿಂದ ಸಣ್ಣಪುಟ್ಟ ವ್ಯಾಪಾರಿಗಳನ್ನು ರಕ್ಷಿಸುವ ಉದ್ದೇಶದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪ್ರಸಕ್ತ ಸಾಲಿನಲ್ಲಿ ಬಡವರ ಬಂಧು ಯೋಜನೆ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದರು.
ರಾಜ್ಯ ಸರ್ಕಾರದ ಮಹತ್ವದ ಈ ಯೋಜನೆ ನಾಳೆ ಯಶವಂತಪುರದ ಎಪಿಎಂಸಿ ತರಕಾರಿ ಮಾರುಕಟ್ಟೆ ಯಾರ್ಡ್‍ನಲ್ಲಿ ಉದ್ಘಾಟನೆಯಾಗಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯೋಜನೆ ಉದ್ಘಾಟಿಸಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಿದ್ದಾರೆ. ವ್ಯಾಪಾರಿಗಳಿಗೆ ಸಾಲ ನೀಡುವ ಈ ಯೋಜನೆಯ ಸಂಚಾರಿ ಸೇವಾ ವಾಹನಕ್ಕೂ ಹಸಿರು ನಿಶಾನೆ ತೋರಲಿದ್ದಾರೆ. ಈ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಅವರು ಸಣ್ಣ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದರು.
ತಳ್ಳುವ ಗಾಡಿ ಅಥವಾ ಮೋಟಾರ್ ವಾಹನದಲ್ಲಿ ಪಾನೀಯ, ಊಟ, ತಿಂಡಿ, ಸಿಹಿ ಪದಾರ್ಥ ಮಾರಾಟ ಮಾಡುವವರು, ಹಣ್ಣು, ಹೂವು, ತರಕಾರಿ ಮಾರುವವರು, ರಸ್ತೆ ಬದಿ ಬುಟ್ಟಿ ವ್ಯಾಪಾರಿಗಳು, ಪಾದರಕ್ಷೆ ಚರ್ಮದ ಉತ್ಪನ್ನಗಳ ರಿಪೇರಿ ಮತ್ತು ಮಾರಾಟ ಮಾಡುವವರು, ಆಟದ ಸಾಮಾನುಗಳು ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ.
ಆದರೆ ರಸ್ತೆ ಬದಿಯಲ್ಲಿ ಸ್ವಚ್ಛತೆ ಹಾಳು ಮಾಡುವ, ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಬಳಸುವ ವ್ಯಾಪಾರಿಗಳಿಗೆ ಈ ಯೋಜನೆಯ ಪ್ರಯೋಜನ ದೊರೆಯುವುದಿಲ್ಲ.
ಯೋಜನೆಯ ಪ್ರಯೋಜನ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರಬೇಕು ಹಾಗೂ ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಾಗಿರಬೇಕು.
ಬಿಬಿಎಂಪಿ ವ್ಯಾಪ್ತಿಯ ವ್ಯಾಪಾರಿಗಳಿಗೆ 5 ಸಾವಿರ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ವಿಜಯಪುರ, ತುಮಕೂರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವ್ಯಾಪಾರಿಗಳಿಗೆ 3 ಸಾವಿರ ರೂ., ಹಾಗೂ ಇತರೆ ನಗರ ಪ್ರದೇಶಗಳಾದ ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ಹಾಸನ, ಹಾವೇರಿ, ಕಾರವಾರ, ಕೋಲಾರ, ಕೊಪ್ಪಳ, ಮಡಿಕೇರಿ, ಮಂಡ್ಯ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ನಗರ ಪ್ರದೇಶಗಳಲ್ಲಿ 1 ಸಾವಿರ ರೂ.ಸಾಲ ನೀಡಲು ಉದ್ದೇಶಿಸಲಾಗಿದೆ.
ಡಿಸಿಸಿ ಬ್ಯಾಂಕ್‍ಗಳು, ಪಟ್ಟಣ ಸಹಕಾರಿ ಬ್ಯಾಂಕ್‍ಗಳು, ಮಹಿಳಾ ಸಹಕಾರಿ ಬ್ಯಾಂಕ್‍ಗಳು ಶೂನ್ಯ ಬಡ್ಡಿ ದರದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲವನ್ನು ನೀಡಲಿವೆ.
ನಗರಸಂಸ್ಥೆಗಳು ಗುರುತಿನ ಚೀಟಿ ನೀಡದೆ ಇದ್ದಲ್ಲಿ ಸಂಬಂಧಿತ ಸಂಸ್ಥೆಯಿಂದ ಗುರುತಿನ ಚೀಟಿಯನ್ನು ವ್ಯಾಪಾರಿಗಳು ಪಡೆಯಲು ಅನುಕೂಲವಾಗುವಂತೆ ಡಿಸಿಸಿ ಬ್ಯಾಂಕ್‍ಗಳು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸಾಲ ಪಡೆಯುವ ವ್ಯಾಪಾರಿಯಿಂದ ಉಳಿತಾಯ ಖಾತೆ ತೆರೆದು ಸಾಲ ವಿತರಣೆಗೆ ಕ್ರಮಕೈಗೊಳ್ಳಬೇಕೆಂದು ಸಹಕಾರ ಇಲಾಖೆ ಬ್ಯಾಂಕ್‍ಗಳಿಗೆ ಸೂಚಿಸಿದೆ.
ಬ್ಯಾಂಕ್‍ನ ಬ್ಯುಸಿನೆಸ್ ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡು ಸಾಲದ ಮೊತ್ತವನ್ನು ಸಂಗ್ರಹಿಸಲು ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಲಾಗಿದೆ. ಸರ್ಕಾರದಿಂದ ದೈನಂದಿನ ಹೊರ ಬಾಕಿಗೆ ಪ್ರತಿ ತ್ರೈಮಾಸಿಕಕ್ಕೆ ಶೇ.10ರ ಬಡ್ಡಿ ಸಹಾಯಧನವನ್ನು ಒದಗಿಸಲಿದೆ ಎಂದು ಸಹಕಾರ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.