ರೈತರ ಸಮಸ್ಯೆ ಬಗೆ ಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲ, ಇದರ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ

ಬೆಂಗಳೂರು, ನ.21- ಕಬ್ಬು ಬೆಳೆಗಾರರ ಬಾಕಿ ಪಾವತಿ ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿತು.

ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ತಕ್ಷಣವೇ ರೈತರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.

ಇಂದು ನಮ್ಮ ಹೋರಾಟ ಆರಂಭವಾಗಿದೆ. ನಿಮ್ಮನ್ನು ಅಧಿಕಾರದಿಂದ ಇಳಿಸಿ ಮನೆಗೆ ಕಳುಹಿಸುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿ.ಎಸ್.ಯಡಿಯೂರಪ್ಪ, ರೈತರ ಸಮಸ್ಯೆಗಳಿಗೆ ಸ್ಪಂದಿಸದ ಹಾಗೂ ರೈತ ಮಹಿಳೆಯ ವಿರುದ್ಧ ಲಘುವಾಗಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ನಾಲ್ಕು ವರ್ಷಗಳಿಂದ ಬೆಳಗಾವಿಯ ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಿಲ್ಲ. ಇದಕ್ಕೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಈಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಯಡಿಯೂರಪ್ಪ, ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಹಾಗೂ ರೈತರಿಗೆ ಬರಬೇಕಿರುವ ಬಾಕಿ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.

ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಣೆ ಮಾಡಿದ ಕುಮಾರಸ್ವಾಮಿ ಅವರು ಆರು ತಿಂಗಳಾದಾರೂ ಈ ಬಗ್ಗೆ ಆದೇಶ ಹೊರಡಿಸಿಲ್ಲ ಎಂದು ದೂರಿದರು.
24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದ ನೀವು ಇದುವರೆಗೆ ಸಾಲ ಮನ್ನಾ ಏಕೆ ಮಾಡಿಲ್ಲ. ಈ ಬಗ್ಗೆ ಶ್ವೇತಪತ್ರ ಹೊರಡಿಸುತ್ತೀರಾ? ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಕಾಂಗ್ರೆಸ್ ವಿರುದ್ಧ ಜೀವಮಾನಪೂರ್ತಿ ಹೋರಾಡಿದ ಜೆ.ಪಿ.ಯವರ ಬೆಂಬಲಿಗರೆಂದು ಎಂದು ಕರೆದುಕೊಳ್ಳುವ ನೀವು ನಿಮ್ಮ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟಿದ್ದೀರಾ. ಇದೇ ಕಾರಣಕ್ಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೀರಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಪ್ರಶ್ನಿಸಿದರು.
ರೈತ ಮಹಿಳೆ ಜಯಶ್ರೀಯವರಿಗೆ ಎಲ್ಲಿ ಮಲಗಿದ್ದೆ ಎಂದು ಕೇಳುವ ಕುಮಾರಸ್ವಾಮಿಯವರಿಗೆ ನೈತಿಕತೆ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇದೂ ಕೂಡ ಪರೋಕ್ಷವಾಗಿ ಮೀಟೂ ಆಂದೋಲನದ ವ್ಯಾಪ್ತಿಗೆ ಬರುವುದಿಲ್ಲವೇ ಎಂದು ಪ್ರಶ್ನಿಸಿದರು.

ರೈತರನ್ನು ಗೂಂಡಾಗಳು, ದರೋಡೆಕೋರರು ಎನ್ನಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಹರಿಹಾಯ್ದ ಯಡಿಯೂರಪ್ಪ ಅವರು, ಡಿಸೆಂಬರ್ 10ರೊಳಗೆ ಕುಮಾರಸ್ವಾಮಿ ಕ್ಷಮೆ ಕೇಳಬೇಕು, ಇಲ್ಲವಾದರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ನಿನ್ನೆ ಮುಖ್ಯಮಂತ್ರಿಯವರು ವಿಧಾನಸೌಧದಲ್ಲಿ ದೊಂಬರಾಟ ಮಾಡಿದರು, ಬೆಳಗಿನಿಂದ ಸಂಜೆವರೆಗೂ ರೈತರನ್ನು ಕಾಯಿಸಿ ಕೊನೆಗೆ ಯಾವುದೇ ತೀರ್ಮಾನ ಮಾಡಲಿಲ್ಲ. ಕುಮಾರಸ್ವಾಮಿ ಬೆಳಗಾವಿಗೆ ಹೋಗಬೇಕಿತ್ತು. ಆದರೆ ಅಲ್ಲಿಗೆ ಹೋಗದೆ ರೈತರಿಗೆ ದ್ರೋಹ ಬಗೆದರು ಎಂದು ಯಡಿಯೂರಪ್ಪ ಆರೋಪಿಸಿದರು.
ನಿಮಗೆ ಬಂದಿರುವುದು ಮೂವತ್ತೇಳು ಸೀಟು ಮಾತ್ರ. ನಾವು ನಿಮ್ಮ ದೊಂಬರಾಟ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಸಂಪನ್ಮೂಲ ಕ್ರೂಢೀಕರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಯಾವ ಶಾಸಕನಿಗೂ ಅವರ ನಿಧಿಯನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿದರು.

ಬಿಜೆಪಿ ಬಗ್ಗೆ ಬಹಳ ಹಗುರವಾಗಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಹತ್ತನೇ ತಾರೀಖಿನಿಂದ ಬೆಳಗಾವಿ ಅಧಿವೇಶನ ಆರಂಭವಾಗುತ್ತಿದೆ. ಅಲ್ಲಿ ನಾವು ಜನರಿಗೆ ಆಗಿರುವ ಅನ್ಯಾಯಗಳನ್ನು ಪ್ರಶ್ನಿಸುತ್ತೇವೆ. ನಿಮಗೆ ಸಾಕಷ್ಟು ಸಮಯ ಕೊಟ್ಟಿದ್ದೇವೆ. ಇನ್ನು ಸಮಯ ನೀಡುವ ಪ್ರಶ್ನೆಯೇ ಇಲ್ಲ. ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಇಂದು ನಮ್ಮ ಹೋರಾಟ ಆರಂಭವಾಗಿದೆ. ನಿಮ್ಮ ಅಧಿಕಾರ ಇಳಿಸಿ ಮನೆಗೆ ಕಳುಹಿಸುವ ವರೆಗೂ ಇದು ನಿಲ್ಲುವುದಿಲ್ಲ. ಹೋರಾಟ ಮಾಡುವ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂದಿರುವುದು ನಾಡಿನ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಯಡಿಯೂರಪ್ಪ ಹೇಳಿದರು.
ಕ್ಷಮೆ ಕೇಳದೆ ಉದ್ಧಟತನ ಪ್ರದರ್ಶಿಸಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ನಿಮಗೆ ಬೆಂಬಲ ನೀಡಿದೆ. ಅದರಿಂದ ರಾಜ್ಯ ಅಧೋಗತಿಗೆ ತಲುಪಿದೆ ಎಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ರೈತರು ಸುವರ್ಣ ಸೌಧದ ಬೀಗ ಹೊಡೆದಿದ್ದಕ್ಕೆ ರೈತರನ್ನು ಗೂಂಡಾ ಎನ್ನುತ್ತಿರುವ ನೀವು ಇತಿಹಾಸದಲ್ಲಿ ದಾಖಲಾಗುತ್ತೀರಿ ಎಂದು ವ್ಯಂಗ್ಯವಾಡಿದರು.

ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಮೀಸೆ ತಿರುವಿ ಮೆರೆದವರೆಲ್ಲ ಏನಾದರೂ ಎಂಬುದು ನಿಮಗೆ ತಿಳಿದಿಲ್ಲವೇ ಎಂದು ಹೇಳಿದರು.
ಬಿಜೆಪಿ ಮುಖಂಡ ಹಾಗೂ ಶಾಸಕ ಆರ್.ಅಶೋಕ್ ಮಾತನಾಡಿ, ತುಘಲಕ್ ದರ್ಬಾರ್ ಬಹಳ ದಿನ ನಡೆಯುವುದಿಲ್ಲ. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ರೈತರಿಗೆ ಅವಮಾನ ಮಾಡಿದ ಸರ್ಕಾರ ರಾಜ್ಯದಿಂದ ತೊಲಗಬೇಕು. ಅಲ್ಲಿಯವರೆಗೂ ನಾವು ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಕುಮಾರಸ್ವಾಮಿ ಭಂಡ ಮುಖ್ಯಮಂತ್ರಿ. ಬೆಳಗಾವಿಗೇ ಬಂದು ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮೊದಲು ಭರವಸೆ ನೀಡಿದ್ದರು. ಬಳಿಕ ಮಾತಿನಿಂದ ಹಿಂದೆ ಸರಿದರು. ಇದರಿಂದ ಆಕ್ರೋಶಗೊಂಡು ರೈತರು ಪ್ರತಿಭಟನೆಗೆ ಇಳಿದರು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕ ಉದಯ್ ಗರುಡಾಚಾರ್, ಶಾರದಾ ನಾಯಕ್ ಮತ್ತಿತರರು ಭಾಗಿಯಾಗಿದ್ದರು. ಕೇಸರಿ ಶಾಲು ಬದಲು ಪ್ರತಿಭಟನಕಾರರು ಹಸಿರು ಶಾಲು ಧರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ