ಬೆಂಗಳೂರು, ನ.19-ರಾಜ್ಯ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪುಷ್ಪ ಅಮರನಾಥ್ ಅವರು ಇಂದು ಪದಗ್ರಹಣ ಮಾಡಿದರು.
ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಅನೇಕ ಮುಖಂಡರ ಸಮ್ಮುಖದಲ್ಲಿ ನಿರ್ಗಮಿತ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ನೂತನ ಅಧ್ಯಕ್ಷೆ ಪುಷ್ಪ ಅಮರನಾಥ್ ಧ್ವಜ ಸ್ವೀಕರಿಸುವ ಮೂಲಕ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮಹಿಳೆಯೆಂದರೆ ಸಂಘರ್ಷ. ರಾಣಿ ಚೆನ್ನಮ್ಮ, ಅಬ್ಬಕ್ಕ, ಬೆಳವಡಿ ಮಲ್ಲಮ್ಮರಂತಹ ಮಹಿಳೆಯರು ಆಳಿದ ನಾಡು ನಮ್ಮದು. ಧೀಮಂತ ನಾಯಕಿ ಇಂದಿರಾಗಾಂಧಿಯವರು ನಮಗೆ ಆದರ್ಶವಾಗಿದ್ದಾರೆ. ಇಂದಿರಾ ಅವರು ನಾಲ್ಕು ವರ್ಷದವರಿದ್ದಾಗ ಅವರ ತಂದೆ-ತಾಯಿ ಜೈಲು ಸೇರಿದ್ದರು. ಅವರದ್ದು ಹೋರಾಟದ ಬದುಕು. 42 ವರ್ಷಕ್ಕೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು ಎಂದು ಹೇಳಿದರು.
20 ವರ್ಷದ ಹಿಂದೆ ನಾನು ಸಾಮಾನ್ಯ ಕಾರ್ಯಕರ್ತಳಾಗಿ ಪಕ್ಷ ಸೇರ್ಪಡೆಯಾದೆ. ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆಯಾಗಿ, ಜಂಟಿ ಕಾರ್ಯದರ್ಶಿಯಾಗಿ, ಡಿಸಿಸಿ ಅಧ್ಯಕ್ಷರಾಗಿ, ಶಾಸಕಿಯಾಗಿ ಆಯ್ಕೆಯಾಗಿದ್ದೇನೆ. ಇದಕ್ಕೆ ನಮ್ಮ ಪಕ್ಷದ ಹಿರಿಯರ ಆಶೀರ್ವಾದ ಕಾರಣ. ಅಧಿಕಾರ ನಮಗೆ ಸಿಗುವ ಅವಕಾಶ. ಇದನ್ನು ಸದ್ಬಳಕೆ ಮಾಡಿಕೊಂಡು ಜನಪರ ಕೆಲಸಗಳನ್ನು ಮಾಡಬೇಕು. ಪುಷ್ಪಾ ಅಮರ್‍ನಾಥ್ ಅವರು ಉತ್ತಮ ಕೆಲಸ ಮಾಡಲಿ. ಪಕ್ಷವನ್ನು ಸದೃಢಗೊಳಿಸಲಿ ಎಂದು ಹೇಳಿದರು.