ರೈತರ ಮುತ್ತಿಗೆ ಹಿನ್ನಲೆ: ವಿಧಾನಸೌಧದ ಸುತ್ತಮುತ್ತ ಬಿಗಿಭದ್ರತೆ

ಬೆಂಗಳೂರು,ನ.19- ರೈತರು ಇಂದು ವಿಧಾನಸೌಧ ಮುತ್ತಿಗೆ ಹಾಕಲು ವಿವಿಧ ಭಾಗಗಳಿಂದ ಬೆಂಗಳೂರಿಗೆ ಲಗ್ಗೆಯಿಟ್ಟ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ನಾಡಿನ ವಿವಿಧ ಭಾಗಗಳಿಂದ ಬೆಳಗ್ಗೆಯಿಂದಲೇ ಬೆಂಗಳೂರಿಗೆ ಸಾವಿರಾರು ಸಂಖ್ಯೆಯಲ್ಲಿ ರೈತರು ಹಸಿರುಶಾಲು ಹೊದ್ದು ಆಗಮಿಸಿದ್ದರು.
ಕೆಲ ರೈತರು ಫ್ರೀಡಂಪಾರ್ಕ್‍ನಲ್ಲಿ ಇನ್ನು ಕೆಲವು ರೈತರು ರೈಲ್ವೆ ನಿಲ್ದಾಣ ಸಮೀಪದಲ್ಲಿ ಜಮಾಯಿಸಿದ್ದರು. ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮೆಜೆಸ್ಟಿಕ್‍ನಿಂದ ಎಲ್ಲಾ ರೈತರು ಒಗ್ಗೂಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು.
ಭಾರೀ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರಿಂದ ಪೆÇಲೀಸರು ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಲ್ಲಿ ಬಿಗಿಭದ್ರತೆ ಕೈಗೊಂಡಿದ್ದರು.

ಡಿಸಿಪಿಗಳಾದ ಅನುಚೇತ್ ಹಾಗೂ ಚೇತನ್ ಸಿಂಗ್ ರಾಥೋಡ್ ನೇತೃತ್ವದಲ್ಲಿ ಫ್ರೀಡಂಪಾರ್ಕ್, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ, ಆನಂದರಾವ್ ವೃತ್ತದ ಫ್ಲೈಓವರ್, ಕೆ.ಆರ್.ವೃತ್ತ, ವಿಧಾನಸೌಧ, ರಾಜಭವನ, ಪ್ಯಾಲೇಸ್ ರಸ್ತೆ ಸೇರಿದಂತೆ ಮತ್ತಿತರ ಕಡೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಭದ್ರತೆ ಒದಗಿಸಲಾಗಿತ್ತು.

ಫ್ರೀಡಂಪಾರ್ಕ್‍ನಲ್ಲಿ ಒಂದು ಸಾವಿರ ಪೆÇಲೀಸರನ್ನು ನಿಯೋಜಿಸಲಾಗಿತ್ತು. ಇದೇ ರೀತಿ ಮೆಜೆಸ್ಟಿಕ್‍ನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪೆÇಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಕೆಲವು ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಬಹುದೆಂಬ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಪಿ ಕ್ಷಿಪ್ರ ಕಾರ್ಯಾಚರಣೆ ಪಡೆ, ಎರಡು ವಾಟರ್‍ಜೆಟ್, ಅಶ್ರುವಾಯು ವಾಹನ, ಅಗ್ನಿಶಾಮಕ ಪಡೆ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನುಒದಗಿಸಲಾಗಿತ್ತು.

ಆನಂದರಾವ್ ವೃತ್ತದಿಂದ ಫ್ರೀಡಂಪಾರ್ಕ್ ಬಳಿ ಬರುತ್ತಿದ್ದಂತೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ಹಂತದಲ್ಲಿ ಪೆÇಲೀಸರು ಮತ್ತು ಪ್ರತಿಭಟನಾನಿರತರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು.

ರೈತರು ಎಷ್ಟೇ ಉದ್ವೇಗಗೊಂಡರೂ ಪೆÇಲೀಸರು ಮಾತ್ರ ಸಹನೆ ಕಳೆದುಕೊಳ್ಳದೆ ಶಾಂತ ರೀತಿಯಿಂದ ವರ್ತಿಸಿ ಪರಿಸ್ಥಿತಿಯನ್ನು ನಿಭಾಯಿಸಬೇಕೆಂದು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಗೃಹಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ್ ಹಿರಿಯ ಪೆÇಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಶಕ್ತಿಸೌಧಕ್ಕೂ ತಟ್ಟಿದ ಬಿಸಿ:
ಇಂದಿನ ರೈತರ ಹೋರಾಟ ಶಕ್ತಿಸೌಧ ವಿಧಾನಸೌಧ, ವಿಕಾಸಸೌಧ, ಉದ್ಯೋಗಸೌಧ, ರಾಜಭವನ, ಹೈಕೋರ್ಟ್‍ಗೂ ಬಿಸಿ ತಟ್ಟಿತು.
ರೈತರು ಮಾರುವೇಷದಲ್ಲಿ ವಿಧಾನಸೌಧಕ್ಕೆ ನುಗ್ಗಬಹುದೆಂಬ ಭೀತಿ ಹಿನ್ನೆಲೆಯಲ್ಲಿ ಪ್ರತಿಯೊಬ್ಬರನ್ನು ತಪಾಸಣೆ ನಡೆಸಿಯೇ ಒಳಬಿಡಲಾಗುತ್ತಿತ್ತು. ಸಿಐಡಿ ಕಚೇರಿ ಬಳಿ ವಿಧಾನಸೌಧಕ್ಕೆ ತೆರಳುವ ವಾಹನಗಳನ್ನು ಬಿಗಿ ತಪಾಸಣೆ ನಡೆಸಿ ಬಿಡಲಾಗುತ್ತಿತ್ತು.
ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಉದ್ಯೋಗಸೌಧದ ಬಳಿ ಇಂದು ಕೇವಲ ಬೆರಳಣಿಕೆಯಷ್ಟು ಜನರು ಕಂಡುಬಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ