ಸಹಕಾರಿಗಳು ಎದ್ದು ನಿಂತರೆ ದೆಹಲಿಯ ಸರ್ಕಾರವೇ ಅಲುಗಾಡುತ್ತದೆ: ಸಚಿವ ಬಂಡಪ್ಪಕಾಶಂಪುರ್ ಎಚ್ಚರಿಕೆ

ಬೆಂಗಳೂರು, ನ.17- ಸಹಕಾರ ಕ್ಷೇತ್ರ ಪರ್ಯಾಯ ಸರ್ಕಾರವಿದ್ದಂತೆ. ಸಹಕಾರಿಗಳು ಎದ್ದು ನಿಂತರೆ ದೆಹಲಿಯ ಸರ್ಕಾರವೇ ಅಲುಗಾಡುತ್ತದೆ ಎಂದು ಸಹಕಾರ ಸಚಿವ ಬಂಡಪ್ಪಕಾಶಂಪುರ್ ಎಚ್ಚರಿಕೆ ನೀಡಿದರು.

65ನೆ ಅಖಿಲ ಭಾರತ ಸಹಕಾರ ಸಪ್ತಾಹ -2018 ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಕರ್ನಾಟಕದಿಂದಲೇ ದಿಲ್ಲಿ ಚಲೋ ನಾವೇ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಸಹಕಾರ ಕ್ಷೇತ್ರದ ಸದಸ್ಯರ ಸಂಖ್ಯೆ 2 ಕೋಟಿಗಿಂತ ಹೆಚ್ಚಿದೆ. ನಾವು ಧ್ವನಿಯೆತ್ತಬೇಕಿದೆ ಎಂದು ಕರೆ ನೀಡಿದರು.

ಸಚಿವನಾದ ಮೇಲೆ ಇದು ನನಗೆ ಮೊದಲ ಅನುಭವ. ನಾನು ಸಚಿವನಾಗಿದ್ದರಿಂದ ನನ್ನ ತವರು ಜಿಲ್ಲೆ ಬೀದರ್‍ನಲ್ಲಿ ಸಹಕಾರ ಸಪ್ತಾಹವನ್ನು ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದ್ದರು. ಸಹಕಾರ ಸಪ್ತಾಹ ಜನರ ಉತ್ಸವವಾಗಬೇಕು. ಗುಜರಾತ್ ಹೊರತು ಪಡಿಸಿ ಕರ್ನಾಟಕ ಸಹಕಾರ ಕ್ಷೇತ್ರದಲ್ಲಿ ಎರಡನೆ ಸ್ಥಾನದಲ್ಲಿದೆ ಎಂದರು.

ರಾಜ್ಯದಲ್ಲಿರುವ 306 ಪಟ್ಟಣ ಸಹಕಾರ ಸಂಘಗಳಲ್ಲಿ 40 ಹೊಸ ಸದಸ್ಯರಾಗಿದ್ದಾರೆ. ಸುಮಾರು 30 ಸಾವಿರ ರೂ. ಕೋಟಿ ಠೇವಣಿ ಇದೆ, 18 ಸಾವಿರ ಕೋಟಿ ಸಾಲ ನೀಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಠೇವಣಿ ಹಣವನ್ನು ರಾಷ್ಟ್ರೀಯ ಬ್ಯಾಂಕಿನ ಬದಲು ಸಹಕಾರ ಬ್ಯಾಂಕ್‍ಗಳಲ್ಲಿ ಇಡಲು ಗಂಭೀರವಾಗಿ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ದೇಶದಲ್ಲೆ ಮೊದಲ ಬಾರಿಗೆ ನಮ್ಮ ಮೈತ್ರಿಕೂಟದ ಸರ್ಕಾರ 45 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಇದು ಐತಿಹಾಸಿಕ ನಿರ್ಧಾರ. ಸಹಕಾರ ಕ್ಷೇತ್ರ ಹಳ್ಳಿಗಳತ್ತ ಹೆಚ್ಚು ಗಮನ ಹರಿಸಬೇಕು, ಗ್ರಾಮೀಣ ಭಾಗಕ್ಕೆ ಹೆಚ್ಚು ಸಾಲ ಕೊಡಬೇಕು. ಪಟ್ಟಣದಲ್ಲೂ ಜನರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಿದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ತೆಂಗು ನಾರು ಮಂಡಲ ಕ್ರೀಯಾಶೀಲವಾಗಿಲ್ಲ. ಇದೇ ರೀತಿ ನಿಷ್ಕ್ರಿಯವಾಗಿರುವ ಮಹಾಮಂಡಲಗಳ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು. ನೆರೆಯ ಮಹಾರಾಷ್ಟ್ರದಲ್ಲಿ ಸಹಕಾರ ಕ್ಷೇತ್ರ ಅದರಲ್ಲೂ ಸಕ್ಕರೆ ಕ್ಷೇತ್ರ ಬಹಳ ಪ್ರಭಾವಿಯಾಗಿದೆ. ನಮ್ಮಲ್ಲಿ ಸಹಕಾರ ಕ್ಷೇತ್ರದ 30 ಸಕ್ಕರೆ ಕಾರ್ಖಾನೆಗಳ ಪೈಕಿ ಎಲ್ಲವೂ ಮುಚ್ಚಿ ಈಗ ಏಳು ಮಾತ್ರ ಉಳಿದಿವೆ. ಬೀದರ್‍ನ ಸಕ್ಕರೆ ಕಾರ್ಖಾನೆ 1969ರಲ್ಲಿ ಆರಂಭವಾಗಿತ್ತು. ಈಗ ನಷ್ಟದಲ್ಲಿದೆ ಅದರ ಪುನಶ್ಚೇತನಕ್ಕೆ ಸರ್ಕಾರದಿಂದ 20 ಕೋಟಿ ರೂ. ಅನುದಾನ ತೆಗೆದುಕೊಳ್ಳಲು ನಾನು ಮತ್ತು ಜಿಲ್ಲೆಯ ಇನ್ನೊಬ್ಬ ಸಚಿವರು ಪರದಾಡಬೇಕಾಯಿತು.

ಕಳೆದ ವರ್ಷ ಕೊಟ್ಟ 10 ಕೋಟಿಯೇ ವಾಪಾಸ್ ಬಂದಿಲ್ಲ. ಮತ್ತೇ ಏಕೆ ಹಣ ಕೊಡಬೇಕು ಎಂದು ಸಕ್ಕರೆ ಆಯುಕ್ತರು, ಜಿಲ್ಲಾಧಿಕಾರಿ ಸೇರಿ ಅಧಿಕಾರಿಗಳು ತಕರಾರು ತೆಗೆದಿದ್ದರು. ನಾವಿಬ್ಬರು ಸಚಿವರು ಸಿಎಂಗೆ ದುಂಬಾಲು ಬಿದ್ದು 20 ಕೋಟಿ ಅನುದಾನ ಬಿಡುಗಡೆಯ ಭರವಸೆ ಪಡೆದುಕೊಂಡಿದ್ದೇವೆ. ಖಾಸಗಿಯವರು ಸಕ್ಕರೆ ಕಾರ್ಖಾನೆಗಳನ್ನು ಲಾಭದಾಯಕವಾಗಿ ನಡೆಸಲು ಸಾಧ್ಯವಿರುವಾಗ ಸಹಕಾರಿಗಳಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಬೀದರ್ ನಲ್ಲಿ ಸಹಕಾರಿ ಕ್ಷೇತ್ರದಿಂದ ಗಾರ್ಮೆಂಟ್ಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ಶೇ.33ರಷ್ಟು ಪಟ್ಟಣ ಸಹಕಾರ ಬ್ಯಾಂಕ್‍ಗಳು ಶೇ.30ರಷ್ಟು ಆದಾಯ ತೆರಿಗೆ ಪಾವತಿಸುತ್ತಿವೆ. ಇದರಿಂದ ಹೊರೆಯಾಗಿದೆ ಎಂದು ಅಸಮಾಧಾನ ವ್ಯಕ್ತಬಪಡಿಸಿದರು.

ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಸಹಕಾರ ತತ್ವ ಅಧಿಕಾರಿಗಳಿಗೆ ಅರ್ಥವಾಗಿಲ್ಲ, ರಾಜಕಾರಣಿಗಳನ್ನು ಎದುರಾಳಿಗಳಂತೆ ನೋಡಿದ್ದರಿಂದ ಸಹಕಾರ ಕ್ಷೇತ್ರ ಹಿಂದುಳಿದಿದೆ. ನೂಲು, ಜವಳಿ ಕ್ಷೇತ್ರದಂತಹ ವಲಯವನ್ನು ದುರ್ಬಲಗೊಳಿಸಿದ್ದರಿಂದ ಖಾಸಗಿ ಗಾರ್ಮೆಂಟ್ಸ್ ಕಂಪೆನಿಗಳು ಬಲಿಷ್ಠವಾಗಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 36 ಸಾವಿರ ಕೋಟಿ ಠೇವಣಿ ಪಟ್ಟಣ ಸಹಕಾರ ಬ್ಯಾಂಕಗಳಿದೆ. ಅದರಲ್ಲಿ ಶೇ.10ರಷ್ಟನ್ನು ಅಂದರೆ ಸರಿ ಸುಮಾರು 10 ಸಾವಿರ ಕೋಟಿಯನ್ನು ಆರ್‍ಬಿಐನ ಸೆಕ್ಷನ್ 25 ಬಳಸಿ ಸಹಕಾರಿ ಷೇರಿನಲ್ಲಿ ಮಾತ್ರ ಹೂಡಿಕೆ ಮಾಡಬೇಕೆಂದು ಸೂಚಿಸಲಾಗಿದೆ. ಇದರಿಂದ ಸಹಕಾರ ಕ್ಷೇತ್ರದ 10 ಸಾವಿರ ಕೋಟಿ ಹಣ ಇಲ್ಲವಾಗಿ ಜಿಲ್ಲಾ ಸಹಕಾರ ಬ್ಯಾಂಕ್‍ಗಳು ಖಾಲಿ ಹೊಡೆಯುತ್ತಿವೆ ಎಂದರು.

ಎಂಎಲ್‍ಸಿ ಎಸ್.ರವಿ, ಪಟ್ಟಣ ಬ್ಯಾಂಕ್‍ಗಳ ಮಹಾಮಂಡಲದ ಅಧ್ಯಕ್ಷ ಡಿ.ಟಿ.ಪಾಟೀಲ್, ಮಾಜಿ ಶಾಸಕರಾದ ಎ.ಎಂ.ಹಿಂಡಸಗೇರಿ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಎನ್.ಗಂಗಣ್ಣ, ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಸೇರಿದಂತೆ ಮತ್ತಿತರರು ಹಾಜರಿದ್ದರು.

ಉಡುಪಿಯ ಹಿರಿಯ ಸಹಕಾರಿ ಸರಳಯ್ಯ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಇದೇ ವೇಳೆ ಸನ್ಮಾನಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ