ಬೆಂಗಳೂರು, ನ.16-ಅದ್ಧೂರಿ ಮದುವೆಗಳಿಂದಲೇ ಹೆಸರಾಗುವ ಸೆಲೆಬ್ರಿಟಿಗಳು ರಾಜಕಾರಣಗಳ ನಡುವೆ ಸರಳ ಮಾದರಿ ಮದುವೆಯ ಮೂಲಕ ಖರ್ಚಿಗೆ ಕಡಿವಾಣ ಹಾಕಿ ಆಹಾರ ಪೋಲು ಮಾಡದ ಪ್ರತಿಜ್ಞೆಯೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟ ಯುವರಾಜ ಇದೀಗ ಹೈಲೈಟ್.
ಅನ್ನ ಬ್ರಹ್ಮ ಎಂದೇ ಹೇಳುವ ನಾವು ಮುಲಾಜಿಲ್ಲದೆ ಆಹಾರವನ್ನು ವೇಸ್ಟ್ ಮಾಡುತ್ತೇವೆ. ಮದುವೆ ಎಂದರೆ ಖರ್ಚಿಗೆ ಕಡಿವಾಣವೇ ಇಲ್ಲದಂತೆ ಆಡಂಬರವೇ ಎಲ್ಲೆಡೆ ಮನೆ ಮಾಡಿರುತ್ತದೆ.
ಇಂದಿನ ಆಧುನಿಕ ಯುಗದಲ್ಲಿ ಮದುವೆಯ ಅರ್ಥಕ್ಕಿಂತ ಹೆಚ್ಚಾಗಿ ವೈಭವದಿಂದ ಸದ್ದು ಮಾಡುವುದೇ ಹೆಚ್ಚು. ಆದರೆ ಕುಮಾರಸ್ವಾಮಿ ಲೇಔಟ್ನಲ್ಲಿ ನಡೆದ ಯುವರಾಜ ಎಂಬುವರ ಮದುವೆ ಇವೆಲ್ಲದಕ್ಕಿಂತ ಭಿನ್ನವಾಗಿತ್ತು.
ಅಲ್ಲದೆ, ಯುವಜನ ಅಗತ್ಯವಾಗಿ ಅಳವಡಿಸಿಕೊಳ್ಳಬೇಕಿರುವ ಸರಳತೆಗೆ ಒತ್ತು ನೀಡಿದ್ದು, ಒಂದೆಡೆಯಾದರೆ ಆಹಾರ ಪೋಲು ಮಾಡದಂತೆ ಕುವೆಂಪು ಅವರ ಕನಸಿನ ಮಂತ್ರ ಮಾಂಗಲ್ಯ ವಿಧಾನದೊಂದಿಗೆ ಬಾಳ ಸಂಗಾತಿಯನ್ನು ವರಿಸಿದರು.
ವಧು-ವರರು ಮಂತ್ರ ಮಾಂಗಲ್ಯದ ಪ್ರತಿಜ್ಞೆ ಮೂಲಕ ಸರಳ ಜೀವನಕ್ಕೆ ಅಡಿ ಇಟ್ಟರೆ, ನೆರೆದಿದ್ದ ಬಂಧು-ಬಾಂಧವರು ಆಹಾರ ಪೋಲು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಊಟ ಮಾಡಿದ ಸಂಭ್ರಮದಲ್ಲಿದ್ದರು.
ಮದುವೆಗೆ ಬಂದು ಶುಭ ಹಾರೈಸಿದ ಎಲ್ಲರಿಗೂ ತಾಂಬೂಲದ ಬದಲಿಗೆ ತುಳಸಿ ಗಿಡ ಹಾಗೂ ಕುವೆಂಪು ಭಾವಚಿತ್ರ ನೀಡಿ ಸರಳತೆಯನ್ನು ಸಾಕ್ಷೀಕರಿಸಿದರು.
ಇದೇ ವೇಳೆ ಆರತಕ್ಷತೆಯ ಅಬ್ಬರದಿಂದ ಮುಕ್ತರಾಗಿ ಆಹಾರ ವ್ಯರ್ಥ ಮಾಡದ ಬಗ್ಗೆ ವರನ ಸ್ನೇಹಿತರ ತಂಡದಿಂದಲೇ ಕಿರುನಾಟಕ ಪ್ರದರ್ಶನವೂ ಜರುಗಿತು.
ವೈಭವದ ವೈಶಿಷ್ಟ್ಯತೆಯೊಂದಿಗೆ ಮೆರಗು ನೀಡುವ ಮದುವೆಯ ಸಮಾರಂಭಗಳಿಗೆ ಸೆಡ್ಡು ಹೊಡೆಯುವಂತೆ ಸರಳ, ಸಜ್ಜನಿಕೆ, ಅನ್ನವೇ ದೇವರೆಂಬ ನಂಬಿಕೆಯಂತೆ ಅನ್ನಕ್ಕೆ ಪ್ರಾಮುಖ್ಯತೆ ನೀಡಿದ ವಿವಾಹ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.