ಕೊನೆಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಭದ್ರಕೋಟೆ ಭೇದಿಸಿದ ಸಿಸಿಬಿ!

ಬೆಂಗಳೂರು: ಅಂಬಿಡೆಂಟ್ ಕಂಪೆನಿಯ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿಯವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು 61ನೇ ಸಿಟಿ ಸಿವಿಲ್ ಕೋರ್ಟ್ ಸೋಮವಾರಕ್ಕೆ ಮುಂದೂಡಿದ್ದು, ಇತ್ತ 4 ದಿನಗಳ ಬಳಿಕ ರೆಡ್ಡಿ ಇರುವ ಸ್ಥಳವನ್ನು ಸಿಸಿಬಿ ಪತ್ತೆ ಮಾಡಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ ಜನಾರ್ದನ ರೆಡ್ಡಿ ಬಂಧನ ಆಗುವ ಸಾಧ್ಯತೆಗಳಿವೆ. ಭಾನುವಾರ ವಿಚಾರಣೆಗೆ ಹಾಜರಾದರೆ ಬಂಧನದಿಂದ ರೆಡ್ಡಿ ಪಾರಾಗಲಿದ್ದು, ಒಂದು ವೇಳೆ ರೆಡ್ಡಿ ಎಸ್ಕೇಪ್ ಆಗಲು ಮುಂದಾದರೆ ಬಂಧನವಾಗುವ ಸಾಧ್ಯೆತಗಳಿವೆ.

ಸಿಸಿಬಿ ಅರೆಸ್ಟ್ ಸುದ್ದಿ ಗೊತ್ತಾಗುತ್ತಿದ್ದಂತೆ ರೆಡ್ಡಿ ನಿಗೂಢ ಸ್ಥಳ ಬದಲಿಸುತ್ತಲೇ ಹೋಗಿದ್ದಾರೆ. ಅತ್ಯಾಪ್ತ ಅಲಿಖಾನ್, ಹಳೆ ಡ್ರೈವರ್ ಬಿಟ್ಟು ಅಜ್ಞಾತ ಸ್ಥಳದಲ್ಲಿ ವಾಸ ಮಾಡುತ್ತಿದ್ದಾರೆ. ಆ ನಿಗೂಢ ಸ್ಥಳವನ್ನು ಬದಲಿಸುತ್ತಲೇ ಹೋಗಿ ಇದೀಗ ಸಿಕ್ಕಿಬಿದ್ದಿದ್ದಾರೆ. ಹೈದರಾಬಾದ್, ಬಳ್ಳಾರಿ, ಬೆಂಗಳೂರು ಬಿಟ್ಟು ಬೇರೆ ಸ್ಥಳದಲ್ಲಿದ್ದಾರೆ. ಆದ್ರೆ ಆ ಅಜ್ಞಾತ ಸ್ಥಳದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಬಿಟ್ಟುಕೊಡುತ್ತಿಲ್ಲ. ಅಲ್ಲಿಂದ ರೆಡ್ಡಿಯನ್ನು ಬೆಂಗಳೂರಿಗೆ ಕರೆತರಲು ಕನಿಷ್ಠ 8-10 ಗಂಟೆ ಬೇಕಾಗುತ್ತದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಬಳ್ಳಾರಿ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರೆಡ್ಡಿ ಎಂಟ್ರಿಯಾಗಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಸಿಎಂ ಕುಮಾರಸ್ವಾಮಿ ಇಬ್ಬರು ಸೇರಿ ಶ್ರೀರಾಮುಲು ಕಟ್ಟಿ ಹಾಕಲು ತಂತ್ರ ರೂಪಿಸಿದ್ದರು. ರಾಮುಲು ಹಣದ ಮೂಲ ಪತ್ತೆಗೆ ಇಂಟಲಿಜೆನ್ಸ್ ರೆಡ್ಡಿ ಬೆನ್ನುಬಿದ್ದಿದ್ದು, ಅಂಬಿಡೆಂಟ್ ಜೊತೆ ನಂಟು ಬಗ್ಗೆ ಸಿಎಂಗೆ ಇಂಟಲಿಜೆನ್ಸ್ ನಿಂದ ಮಾಹಿತಿ ಸಿಕ್ಕಿದೆ. ಹೀಗಾಗಿ ಕೂಡಲೇ ಸಿಎಂ ಅವರು ಪೊಲೀಸ್ ಆಯುಕ್ತರಿಗೆ ಸಿಸಿಬಿಗೆ ಪ್ರಕರಣ ವರ್ಗಕ್ಕೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ಅವರು ಅಂಬಿಡೆಂಟ್ ಮಾಲೀಕ ಫರೀದ್‍ಗೆ ಬುಲಾವ್ ನೀಡಿ ಡಾಕ್ಯುಮೆಂಟ್ಸ್ ತೋರಿಸಿ ಬಾಯಿ ಬಿಡಿಸಿದ್ದಾರೆ. ಇದೇ ವೇಳೆ ರೆಡ್ಡಿಗೂ ನಿನಗೂ ಏನ್ ಸಂಬಂಧ ಅಂತ ಪ್ರಶ್ನಿಸಿದಾಗ ಪ್ರಕರಣದ ಸಂಪೂರ್ಣ ವಿವರ ಹೊರಬಿದ್ದಿದ್ದು, ಫರೀದ್ 20 ಕೋಟಿ ಡೀಲ್ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಮೂಲಕ ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಕೂಡಲೇ ಮೊಳಕಾಳ್ಮೂರಿನಲ್ಲೇ ರೆಡ್ಡಿ ಬಂಧನಕ್ಕೆ ಸಿಸಿಬಿ ಖೆಡ್ಡಾ ತೋಡಿತ್ತು. ಆದ್ರೆ ತಾನು ಬಂಧನವಾಗುವ ಬಗ್ಗೆ ಸುಳಿವು ಸಿಗುತ್ತಿದ್ದಂತೆಯೇ ರೆಡ್ಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಎಸ್ಕೇಪ್ ಬಳಿಕ ಪತ್ನಿ ಅರುಣಾ ಜೊತೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಯೋಗಕ್ಷೇಮಕ್ಕಾಗಿ ಮಾಡಿದ್ದ ಕರೆ ಆಧರಿಸಿ ಸಿಸಿಬಿ ಪೊಲೀಸರು ಬೆನ್ನು ಬಿದ್ದಿದ್ದರಿಂದ ಇದೀಗ ರೆಡ್ಡಿ ಇರುವ ಸ್ಥಳ ತಿಳಿದಿದೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಜನಾರ್ದನ ರೆಡ್ಡಿ ಬಂಧನವಾಗಬಹುದು ಎಂಬ ಮಾಹಿತಿಯೊಂದು ಲಭ್ಯವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ