ನೋಟು ಅಮಾನ್ಯೀಕರಣಕ್ಕೆ 2 ವರ್ಷ: ‘ಕರಾಳ ದಿನ’ ಎಂದು ಕರೆದ ಕಾಂಗ್ರೆಸ್

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕತೆಯಲ್ಲಿ ಜಾರಿಗೆ ತಂದ ನೋಟು ನಗದೀಕರಣಕ್ಕೆ ಗುರುವಾರಕ್ಕೆ 2 ವರ್ಷವಾಗಿದೆ. ಈ ದಿನವನ್ನು ಪ್ರಜಾಪ್ರಭುತ್ವದಲ್ಲಿ ಕರಾಳ ದಿನ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

ಅಧಿಕ ಮೌಲ್ಯದ ನೋಟುಗಳ ಅನಾಣ್ಯೀಕರಣದಿಂದ ಆದ ವೆಚ್ಚ ಮತ್ತು ನಷ್ಟವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಭರಿಸಿದ್ದಾರೆ. ಪ್ರಧಾನಿ ಮೋದಿಯವರ ಕೆಲವು ಆಪ್ತ ಉದ್ಯಮಿಗಳಿಗೆ ಮಾತ್ರ ಲಾಭವಾಗಿದೆ. ನಮ್ಮ ದೇಶದ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವಕ್ಕೆ ಅನಾಣ್ಯೀಕರಣ ಕಪ್ಪು ದಿನವಾಗಿದೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ, ಅನಾಣ್ಯೀಕರಣ ತತ್ತರದ 2ನೇ ವರ್ಷವಿಂದು. ಕರಾಳ ದಿನವಿಂದು, ಅದು ಘೋಷಣೆಯಾದಾಗಲೇ ನಾನು ಹೇಳಿದ್ದೆ. ಖ್ಯಾತ ಆರ್ಥಿಕ ತಜ್ಞರು, ಸಾಮಾನ್ಯ ಜನರು ಮತ್ತು ಎಲ್ಲಾ ತಜ್ಞರು ಅದನ್ನು ಒಪ್ಪಿಕೊಳ್ಳುತ್ತಾರೆ ಎಂದಿದ್ದಾರೆ.

ನವೆಂಬರ್ 8, 2016ರಂದು ನರೇಂದ್ರ ಮೋದಿಯವರು ನೋಟು ಅನಾಣ್ಯೀಕರಣ ಅಲಿಯಾಸ್ ನೋಟು ಬಂದ್ ನ್ನು ಜಾರಿಗೆ ತಂದರು. ಅದು ಆರ್ಥಿಕತೆ ವಿಚಾರದಲ್ಲಿ ಸೋಲು. ಬ್ಯಾಂಕು ಮುಂದೆ ಸಾಲಿನಲ್ಲಿ ನಿಂತು ಪ್ರತಿದಿನ ನೂರಕ್ಕೂ ಹೆಚ್ಚು ಜನರು ಕಷ್ಟಪಡುತ್ತಿದ್ದರು. ಈ ದಿನ ದಯಮಾಡಿ 2 ನಿಮಿಷ ಮೌನಾಚರಣೆ ಮಾಡಿ ಎಂದು ಹೇಳಿದ್ದಾರೆ,

ಕಾಂಗ್ರೆಸ್ ಇಂದು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಕಳೆದ ವರ್ಷ ಕೂಡ ನವೆಂಬರ್ 8ರಂದು ಕಾಂಗ್ರೆಸ್ ಮತ್ತು ವಿವಿಧ ಪ್ರತಿಪಕ್ಷಗಳು ದೇಶದ ಅನೇಕ ಕಡೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ