ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳು ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಗುರುವಾರ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡಲಿದ್ದು ಅಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡ ಉಪಸ್ಥಿತರಿರುತ್ತಾರೆ.
ಮೊನ್ನೆ ನಡೆದ ಉಪ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಗೆಲುವು ಸಾಧಿಸಿದ ನಂತರ ಮುಂಬರುವ ಲೋಕಸಭೆ ಚುನಾವಣೆಗೆ ಮತ್ತೊಮ್ಮೆ ಒಟ್ಟಾಗಿ ಸ್ಪರ್ಧಿಸುವ ಕುರಿತು ಸಮಾಲೋಚಿಸಲು ಚಂದ್ರಬಾಬು ನಾಯ್ಡು ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡುತ್ತಿದ್ದು, ಈ ಮಾತುಕತೆ ಕುತೂಹಲ ಕೆರಳಿಸಿದೆ