ಅಯೋಧ್ಯೆ: ದೇಗುಲಗಳ ನಗರಿ ಅಯೋಧ್ಯೆಯಲ್ಲಿ ರಾಮನ ಮಹಾ ಪ್ರತಿಮೆ ನಿರ್ಮಿಸುವುದಾಗಿ ಘೋಷಿಸುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿಯ ಹಿಂದುತ್ವದ ಅಜೆಂಡಾಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ.
ಬುಧವಾರ ಅಯೋಧ್ಯೆಯಲ್ಲಿ ಮಾತನಾಡುತ್ತಿದ್ದ ಅವರು, ಶ್ರೀರಾಮನ ದರ್ಶನ ಮತ್ತು ಅರ್ಚನೆಗಾಗಿ ಜನರು ಅಯೋಧ್ಯೆಗೆ ಬರುತ್ತಿದ್ದು, ಪ್ರತಿಮೆ ನಿರ್ಮಾಣದಿಂದ ಅವರ ಉದ್ದೇಶ ಈಡೇರುತ್ತದೆ ಎಂದು ಹೇಳಿದ್ದಾರೆ.
ರಾಮಮಂದಿರ ನಿರ್ಮಾಣದ ಬಗ್ಗೆ ಉತ್ತರಿಸಿದ ಅವರು, ಮಂದಿರ ಇತ್ತು, ಇದೆ ಮತ್ತು ಇರಲಿದೆ ಎಂದರು.
ಸಂವಿಧಾನಾತ್ಮಕ ಚೌಕಟ್ಟಿನಡಿಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಇರುವ ಆಯ್ಕೆಗಳ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಅಯೋಧ್ಯೆಯ ನಂಬಿಕೆಗಳನ್ನು ಸರ್ಕಾರ ಗೌರವಿಸುತ್ತದೆ. ಶ್ರೀರಾಮನೇ ಅಯೋಧ್ಯೆಯ ಗುರುತು. ಎಲ್ಲಾ ಹಿಂದೂ ಸಂತರು ನಮ್ಮೊಂದಿಗಿದ್ದಾರೆ, ಎಂದು ಅವರು ಹೇಳಿದರು.
ಬುಧವಾರ ಮುಂಜಾನೆ, ರಾಮನ ಪ್ರತಿಮೆ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಾಗಕ್ಕೆ, ಬಳಿಕ ರಾಮಜನ್ಮಭೂಮಿ, ಹನುಮಾನ್ ಗರ್ಹಿ ಮತ್ತು ಕನಕ ಭವನಕ್ಕೂ ಸಹ ಅವರು ಭೇಟಿ ಕೊಟ್ಟಿದ್ದರು.