ಬೆಂಗಳೂರು, ನ.7-ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸಂಬಂಧ ಮುಂದುವರೆಯಲಿದ್ದು, ಈಗಾಗಲೇ ಮೂರು ಕ್ಷೇತ್ರಗಳ ಹಂಚಿಕೆಯಾಗಿದೆ. ಉಳಿದ 25 ಕ್ಷೇತ್ರಗಳಲ್ಲಿನ ಮೈತ್ರಿ ಕುರಿತಂತೆ ಆದಷ್ಟು ಬೇಗ ಮಾತುಕತೆ ನಡೆಸಲಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019ರ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಮಧುಬಂಗಾರಪ್ಪ ಅವರೇ ಆಗಿದ್ದಾರೆ. ಶಿವಮೊಗ್ಗದಲ್ಲಿ ನಾವು ಸೋತು ಗೆದ್ದಿದ್ದೇವೆ. ಮಧುಬಂಗಾರಪ್ಪ ಅವರಿಗೆ ಪ್ರಚಾರ ಮಾಡಲು ಸಮಯವೇ ಸಿಗಲಿಲ್ಲ. ರಾತ್ರೋರಾತ್ರಿ ವಿದೇಶದಿಂದ ಬಂದು ಬೆಳಗ್ಗೆ ನಾಮಪತ್ರ ಸಲ್ಲಿಸಿದರು. ಹಾಗಿದ್ದೂ ಸಹ ಭಾರೀ ಪೈಪೆÇೀಟಿ ನೀಡಿ ಉತ್ತಮ ಮತ ಗಳಿಸಿದ್ದಾರೆ. ಇದರಿಂದ ನಾವು ಸೋತು ಗೆದ್ದಿದ್ದೇವೆ ಎಂದು ನುಡಿದರು.
ಮಧುಬಂಗಾರಪ್ಪ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಎಂಎಲ್ಸಿಯಾಗಲು ಅವರು ಒಪ್ಪುವುದಿಲ್ಲ. ಈ ಹಿಂದೆ ಇಂತಹ ಪ್ರಸ್ತಾಪ ಬಂದಾಗ ಅವರು ತಿರಸ್ಕರಿಸಿದ್ದಾರೆ ಎಂದು ವಿವರಿಸಿದರು.
ಮುಂದಿನ ಚುನಾವಣೆಗೆ ಈಗಿನಿಂದಲೇ ಎರಡೂ ಪಕ್ಷಗಳು ತಯಾರಿ ನಡೆಸಿದ್ದೇವೆ. ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿರುವುದು ನಮಗೆ ಎಚ್ಚರಿಕೆಯ ಘಂಟೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.
ಮಧು ಕೇವಲ ಶಿವಮೊಗ್ಗಕ್ಕೆ ಸೀಮಿತವಲ್ಲ. ಅವರು ರಾಜ್ಯದ ನಾಯಕರು ಎಂದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಲ್ಲೂ ಸುತ್ತಾಡದಂತೆ ಮಧು ಅವರನ್ನು ಕಟ್ಟಿ ಹಾಕಿದ್ದರು. ಆದರೆ ಇದೀಗ ಯಡಿಯೂರಪ್ಪ ಅವರ ಭದ್ರಕೋಟೆಯಲ್ಲಿ ದೊಡ್ಡ ಬಿರುಕು ಬಿಟ್ಟಿದೆ. ಬಳ್ಳಾರಿ, ದೆಹಲಿಗೆ ಮಾರ್ಗ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರಿಗೆ ಇಲ್ಲೂ ಕೂಡ ಕೋಟೆ ಛಿದ್ರವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ತನಿಖಾ ಸಂಸ್ಥೆಗಳ ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ತಮಗೆ ತಿಳಿದಿಲ್ಲ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಮಾತ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೇನೆ. ರಾಜಕಾರಣ ಎಂದಿಗೂ ನಿಂತ ನೀರಲ್ಲ. ಅದು ಜಂಗಮ. ಸಿದ್ದರಾಮಯ್ಯ ಸಿದ್ದರಾಮಯ್ಯನೇ, ವಿಶ್ವನಾಥ್ ವಿಶ್ವನಾಥನೇ ಎಂದು ಮಾರ್ಮಿಕವಾಗಿ ನುಡಿದರು.
ಎಸ್.ಬಂಗಾರಪ್ಪ ಸ್ಪರ್ಧೆ ಮಾಡಿದ್ದಾಗ ಬಿಜೆಪಿಯವರು ಹೆಂಡ, ದುಡ್ಡು ಹಂಚಿದ್ದರು. ಅದು ನಾವಲ್ಲ. ಮಧುಬಂಗಾರಪ್ಪ ಅಂತಹ ಕೆಲಸ ಮಾಡುವುದಿಲ್ಲ ಎಂದ ಅವರು, ನನಗೆ ಮಂತ್ರಿ ಸ್ಥಾನ ಬೇಡವೆಂದು ಹೇಳಿದ್ದೇನೆ. ನಾನು ರಾಜ್ಯ ಮಟ್ಟದ ನಾಯಕನಾಗಿ ಹೊರಹೊಮ್ಮಲು ಜೆಡಿಎಸ್ ಕಾರಣ ಎಂದರು.
ಮಧು ಬಂಗಾರಪ್ಪ ಮಾತನಾಡಿ, ಸೋಲನ್ನು ನನ್ನ ಹೆಗಲಿಗೆ ತೆಗೆದುಕೊಳ್ಳುತ್ತೇನೆ. ನಾನು ಶಿವಮೊಗ್ಗದಲ್ಲಿ ಸೋತರೂ ಮೈತ್ರಿ ಸರ್ಕಾರ ರಾಜ್ಯದಲ್ಲಿ ಗೆದ್ದಿದೆ. ಶಿವಮೊಗ್ಗದ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಒಪ್ಪಿಕೊಂಡಿದ್ದಾರೆ. ಅದಕ್ಕೆ ಉಪಚುನಾವಣೆ ಮತ ಗಳಿಕೆಯೇ ಸಾಕ್ಷಿ ಎಂದು ತಿಳಿಸಿದರು.
ಸರ್ಕಾರವೇ ನಮ್ಮದು. ಅದರಲ್ಲಿ ನಾನು ಯಾವತ್ತೂ ಪಾಲು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.