ಬೆಂಗಳೂರು,ನ.7- ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಾಳೆ ಭೇಟಿ ಮಾಡಿ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಲಿರುವ ಚಂದ್ರಬಾಬು ನಾಯ್ಡು ಅವರು, ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ರಚನೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಒಗ್ಗೂಡುವಿಕೆ, ರಾಜ್ಯ ರಾಜಕೀಯ, ಲೋಕಸಭಾ ಚುನಾವಣೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ಅದರಲ್ಲಿ ಬಿಜೆಪಿಯ ಮುಖಭಂಗ ಜೆಡಿಎಸ್, ಕಾಂಗ್ರೆಸ್ನ ಗೆಲುವಿನ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಮಾರಂಭಕ್ಕೆ ವಿವಿಧ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ರಾಷ್ಟ್ರದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಪಕ್ಷಗಳ ಒಗ್ಗೂಡುವಿಕೆಗೆ ಪ್ರಯತ್ನ ನಡೆಸುತ್ತಿರುವ ದೇವೇಗೌಡರಿಗೆ ಹಲವು ನಾಯಕರು ಬೆಂಬಲ ಸೂಚಿಸಿ ಅಂದಿನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಪಕ್ಷದ ಚಟುವಟಿಕೆಗಳು ತೀವ್ರಗೊಳುತ್ತಿರುವುದರಿಂದ ಈ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.