ಬೆಂಗಳೂರು,ನ.7-ಐದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಕೂಗು ಶಾಸಕರಿಂದ ಕೇಳಿಬಂದಿದೆ.
ಸರ್ಕಾರ ರಚನೆಯಾದ ದಿನದಿಂದಲೂ ಸಂಪುಟ ವಿಸ್ತರಣೆ ಮಾಡಬೇಕೆಂದು ಕೆಲ ಶಾಸಕರು ಒತ್ತಡ ಹೇರುತ್ತಲೇ ಬಂದಿದ್ದರು. ಅದರಲ್ಲೂ ಕೆಲವರಂತೂ ಸರ್ಕಾರದ ವಿರುದ್ಧವೇ ತಿರುಗಿ ಬೀಳುವ ಮುನ್ಸೂಚನೆ ನೀಡಿದ್ದರು.
ಇದೀಗ ಬಳ್ಳಾರಿ, ಮಂಡ್ಯ, ಶಿವಮೊಗ್ಗ ಹಾಗೂ ರಾಮನಗರ ಮತ್ತು ಜಮಖಂಡಿ ಕ್ಷೇತ್ರಗಳ ಉಪಸಮರದಲ್ಲಿ ದೋಸ್ತಿ ಪಕ್ಷಗಳ ಕೈ ಮೇಲಾಗಿರುವುದರಿಂದ ಶಾಸಕರು ಸಂಪುಟ ವಿಸ್ತರಣೆ ಮಾಡುವಂತೆ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ನಿನ್ನೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಉಭಯ ಪಕ್ಷಗಳ ಮುಖಂಡರು ಸಂಪುಟ ವಿಸ್ತರಣೆ ಕುರಿತಂತೆ ಮಾತುಕತೆ ನಡೆಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಕೆಲ ಪ್ರಮುಖರು ಮಾತುಕತೆ ನಡೆಸಿ ಸಂಪುಟ ವಿಸ್ತರಣೆಯ ಸಾಧಕಬಾಧಕಗಳ ಬಗ್ಗೆ ಅಭಿಪ್ರಾಯಪಡೆದಿದ್ದಾರೆ.
15ಕ್ಕೆ ದೆಹಲಿಗೆ ಸಿದ್ದು:
ಉಪಚುನಾವಣೆಯಲ್ಲಿ ಜನಾಭಿಪ್ರಾಯ ಸರ್ಕಾರದ ಪರವಾಗಿದೆ ಎಂಬುದು ಫಲಿತಾಂಶದಿಂದ ಕಂಡುಬಂದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 15ರಂದು ದೆಹಲಿಗೆ ತೆರಳಲಿದ್ದಾರೆ.
ಸದ್ಯಕ್ಕೆ ಕಾಂಗ್ರೆಸ್ ವರಿಷ್ಠರು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಘಡ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಬಗ್ಗೆ ತಲ್ಲೀನರಾಗಿದ್ದಾರೆ. ಹೀಗಾಗಿ ಕರ್ನಾಟಕ ರಾಜಕಾರಣದ ಬಗ್ಗೆ ಗಮನಹರಿಸಿಲ್ಲ.
ಅಭ್ಯರ್ಥಿಗಳ ಆಯ್ಕೆ, ಪ್ರಣಾಳಿಕೆ ತಯಾರಿಕೆ, ಪ್ರಚಾರ ಸೇರಿದಂತೆ ಐದು ರಾಜ್ಯಗಳಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್ ಕರ್ನಾಟಕದ ಸಂಪುಟ ವಿಸ್ತರಣೆ ಬಗ್ಗೆ 15ರ ನಂತರವೇ ರಾಜ್ಯ ನಾಯಕರ ಜೊತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿಂತೆ ಇಲ್ಲ: ಕಳೆದ ಬಾರಿ ಸಂಪುಟ ವಿಸ್ತರಣೆಯಾದ ನಂತರ ಕೆಲ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದರು. ಅದರಲ್ಲೂ ಶಾಸಕರಾದ ಎಂ.ಟಿ.ಬಿ.ನಾಗರಾಜ್, ಡಾ.ಸುಧಾಕರ್ ಮತ್ತಿತರರು ಆಪರೇಷನ್ ಕಮಲಕ್ಕೆ ಒಳಗಾಗಲಿದ್ದಾರೆ ಎಂಬ ಆತಂಕ ಉಂಟಾಗಿತ್ತು.
ಜೊತೆಗೆ ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ವಿಷಯದಲ್ಲಿ ಅಂದಿನ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಷಯದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮಧ್ಯಪ್ರವೇಶ ಮಾಡಿದ್ದರಿಂದ ಜಾರಕಿಹೊಳಿ ಸಹೋದರರು ಬಹಿರಂಗವಾಗಿಯೇ ತೊಡೆತಟ್ಟಿದ್ದರು.
ಆದರೆ ಪಂಚ ಕ್ಷೇತ್ರಗಳ ಉಪಸಮರದಲ್ಲಿ ಜನಾಭಿಪ್ರಾಯ ಸರ್ಕಾರದ ಪರವಾಗಿದೆ ಎಂಬ ಮನೋಭಾವನೆಯಿಂದಾಗಿ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ದೃಢ ನಿರ್ಧಾರಕ್ಕೆ ಉಭಯ ಪಕ್ಷಗಳ ಮುಖಂಡರು ಬಂದಿದ್ದಾರೆ.
ಆಪರೇಷನ್ ಕಮಲಕ್ಕೆ ಒಳಗಾದರೆ ಉಪಚುನಾವಣೆಯಲ್ಲಿ ಸರ್ಕಾರದ ವಿರುದ್ಧ ಗೆದ್ದು ಬರುವುದು ಅಷ್ಟು ಸುಲಭವಲ್ಲ ಎಂಬುದು ಕೆಲವರಿಗೆ ಮನವರಿಕೆಯಾಗಿದೆ.
ಹೀಗಾಗಿ ಯಾರೊಬ್ಬರೂ ಸಂಪುಟ ವಿಸ್ತರಣೆಯಾದರೆ ಪಕ್ಷದ ವಿರುದ್ಧ ಅಸಮಾಧಾನಗೊಳ್ಳುವುದಿಲ್ಲ ಎಂಬ ನಂಬಿಕೆ ಎರಡೂ ಪಕ್ಷಗಳಲ್ಲಿದೆ.
ಮೂಲಗಳ ಪ್ರಕಾರ ಡಿಸೆಂಬರ್ 25ರಂದು ಸಂಪುಟ ವಿಸ್ತರಣೆಯಾಗಲಿದೆ. 15ರಂದು ದೆಹಲಿಯಲ್ಲಿ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ.
ಈ 10 ದಿನದ ಅವಧಿಯಲ್ಲಿ ಶಾಸಕರ ಮನಸ್ಥಿತಿಯನ್ನು ಅರಿತು ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ ಸರ್ಕಾರ ಕೈ ಹಾಕಲಿದೆ. ಒಂದು ವೇಳೆ ಇಲ್ಲಿಯೂ ಭಿನ್ನಮತ ದೊಡ್ಡ ಮಟ್ಟದಲ್ಲಿ ಕಂಡುಬಂದರೆ ಬೆಳಗಾವಿ ಅಧಿವೇಶನದ ಬಳಿಕ ಸಾಗಹಾಕಲು ತಂತ್ರ ರೂಪಿಸಲಾಗಿದೆ.