ಅನುದಾನಿತ ಕಾನೂನು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಇನ್ನೂ ಬಿಡುಗಡೆಯಾಗದ ವೇತನ

Varta Mitra News

ಬೆಂಗಳೂರು, ನ.5-ರಾಜ್ಯದ 19ಕ್ಕೂ ಹೆಚ್ಚು ಅನುದಾನಿತ ಕಾನೂನು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕಳೆದ 6 ತಿಂಗಳಿಂದ ವೇತನ ಬಿಡುಗಡೆಯಾಗದ ವಿಷಯ ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡಿದ್ದು, ವಿರೋಧ ಪಕ್ಷಗಳು ಈ ವಿಷಯವನ್ನು ಮುಂದಿಟ್ಟು ಹೋರಾಟ ನಡೆಸಲು ಸಿದ್ಧತೆ ನಡೆಸಿವೆ.

ಅನುದಾನಿತ ಕಾನೂನು ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ 600 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಳೆದ ಆರು ತಿಂಗಳಿಂದ ವೇತನಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ ಮತ್ತು ರಾಜ್ಯ ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ಹಣವಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಲವು ಬಾರಿ ಸಾರ್ವಜನಿಕ ಸಭೆಗಳಲ್ಲಿ ಹೇಳಿದ್ದರು. ಆದರೆ ಕೆಲಸ ಮಾಡಿದ ಸಿಬ್ಬಂದಿಗೆ ವೇತನ ನೀಡದ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹಣ ಬಿಡುಗಡೆಗೆ ಇರುವ ಅಡ್ಡಿಯಾದರೂ ಏನು ? ಯಾಕಾಗಿ ಆರು ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವೇತನ ಸಿಗದ ಉಪನ್ಯಾಸಕರು ಒತ್ತಾಯಿಸಿದ್ದಾರೆ.
ಆರು ತಿಂಗಳಿಂದ ವೇತನ ಸಿಗದ ಪರಿಣಾಮ ಅನುದಾನಿತ ಕಾನೂನು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದರೂ ಪರಿಹಾರ ಸಿಗದೆ ವೇತನಕ್ಕಾಗಿ ನಿತ್ಯ ಅಲೆಯುವಂತಾಗಿದೆ. ಶಿಕ್ಷಣ ಇಲಾಖೆಯನ್ನು ಕೇಳಿದರೆ ಅಧಿಕಾರಿಗಳು ಸರ್ಕಾರದತ್ತ ಬೊಟ್ಟು ಮಾಡುತ್ತಾರೆ.

ಸರ್ಕಾರಿ ಕಾನೂನು ಕಾಲೇಜುಗಳ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ಬರುತ್ತಿದೆ. ಆದರೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವ್ಯಾಪಿಗೆ ಬರುವ ಸಿಬ್ಬಂದಿಗಳಿಗೆ 6 ತಿಂಗಳಿಂದ ವೇತನ ಸಿಕ್ಕಿಲ್ಲ. ಅನುದಾನ ಯಾಕೆ ಬರುತ್ತಿಲ್ಲ ಎಂದು ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಅಲ್ಲದೆ, 6ನೇ ವೇತನ ಆಯೋಗದ ಶಿಫಾರಸ್ಸುಗಳ ಅನ್ವಯ ಜೂನ್ ತಿಂಗಳಿಂದಲೇ ಅನುದಾನಿತ ಕಾನೂನು ಕಾಲೇಜಿನ ಬೋಧಕರಿಗೆ ವೇತನ ಪರಿಷ್ಕರಣೆ ಆಗಬೇಕಿತ್ತು. ಯಾವ ತಪ್ಪು ಮಾಡದೇ ನಾವು ಹಳೆಯ ವೇತನವನ್ನೇ ಪಡೆಯುವಂತಾಗಿದೆ. 7ನೇ ವೇತನ ನಿಯಮ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಯುಜಿಸಿಯು ಈಗಾಗಲೇ ಶಿಫಾರಸ್ಸು ಮಾಡಿದ್ದರೂ ಇಲ್ಲಿಯವರೆಗೆ ಅನುಮೋದನೆಗೊಂಡಿಲ್ಲ. ಈ ಎಲ್ಲ ಸಮಸ್ಯೆಗಳಿಂದ ಸಿಬ್ಬಂದಿಗಳು ಹೈರಾಣಗೊಂಡಿದ್ದಾರೆ ಮತ್ತು ಸಂಬಳ ಸಿಗದೆ ಜೀವನ ನಿರ್ವಹಣೆಯೂ ಕಷ್ಟವಾಗುತ್ತಿದೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ಈ ನಮ್ಮ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಶೀಘ್ರ ಬಗೆಹರಿಸಬೇಕು ಎಂದು ಅನುದಾನಿತ ಕಾನೂನು ಕಾಲೇಜಿನ ಶಿಕ್ಷಕರು ಒತ್ತಾಯಿಸಿದ್ದಾರೆ.

ಸರ್ಕಾರಿ ಕಾನೂನು ಕಾಲೇಜುಗಳಿಗೆ ಮತ್ತು ಅನುದಾನಿತ ಕಾನೂನು ಕಾಲೇಜುಗಳ ನೇಮಕಾತಿ ನಿಯಮ ಮತ್ತು ಆದೇಶಗಳು ಒಂದೇ ಇದ್ದರೂ ಹಿಂದಿನಿಂದಲೂ ವೇತನ ನೀಡುವಿಕೆಯಲ್ಲಿ ಇವರಿಬ್ಬರ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.2 ಹೆಚ್ಚಳವಾದರೂ ಸಿಬ್ಬಂದಿಗಳ ವೇತನದಲ್ಲಿ ಪರಿಷ್ಕರಣೆಯಾಗಿಲ್ಲ. ಇದು ಅನ್ಯಾಯದ ಪರಮಾವಧಿ ಎಂದು ಶಿಕ್ಷಕರು ಆರೋಪಿಸಿದ್ದಾರೆ.

ಕಾನೂನು ಇಲಾಖೆಗೆ ವ್ಯಾಪಿಗೆ ಬರುವ ಜಂಟಿ ನಿರ್ದೇಶಕ (ಜೆಡಿ) ಮತ್ತು ಕಮೀಷನರ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಡಿ ಗ್ರೂಪ್‍ನಿಂದ ಹಿಡಿದು ಮೇಲಾಧಿಕಾರಿಗಳವರೆಗೂ ತಮ್ಮ ವೇತನದ ಚೆಕ್‍ನ್ನು ಬ್ಯಾಂಕಿಗೆ ಹಾಕಿಸಿಕೊಳ್ಳಲು ಲಂಚ ನೀಡಬೇಕಿದೆ. ಒಂದು ವೇಳೆ ಲಂಚ ನೀಡದಿದ್ದರೆ ಅಧಿಕಾರಿಗಳು ಬೇರೆ ಸಮಸ್ಯೆ ಹೇಳಿ ತಡೆಹಿಡಿಯುತ್ತಾರೆ. ಆದ್ದರಿಂದ ಇಂತಹ ಸಮಸ್ಯೆಗಳ ಮುಕ್ತಿಗೆ ನಮ್ಮನ್ನು ಕಾನೂನು ಇಲಾಖೆಯ ವ್ಯಾಪಿಗೆ ತಂದರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಮತ್ತೊಬ್ಬ ಕಾನೂನು ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಉಪ ಚುನಾವಣೆ, ಫಲಿತಾಂಶದ ಗುಂಗಿನಲ್ಲಿರುವ ಸರ್ಕಾರಕ್ಕೆ ವೇತನಕ್ಕಾಗಿ ಕಾಯುತ್ತಿರುವ ಶಿಕ್ಷಕರ ಗೋಳು ಕೇಳಿಸದಿರುವುದು ಮಾತ್ರ ವಿಪರ್ಯಾಸ !

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ