ಬೆಂಗಳೂರು, ನ.5- ಸರ್ಕಾರಿ ಆದೇಶಗಳನ್ನು ಮತ್ತು ಉನ್ನತ ಮಟ್ಟದ ಸಮಿತಿಯ ತೀರ್ಮಾನಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ಭೂಮಿ ಮತ್ತು ವಸತಿ ಸಮಸ್ಯೆಗಳನ್ನು ಬಗೆಹರಿಸಲು ತುರ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನ.12ರಂದು ರಾಜ್ಯಾದ್ಯಂತ ಜಿಲ್ಲಾಮಟ್ಟದಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕ ಸಿರಿಮನೆ ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಡ ಜನರ ಭೂಮಿ ಮತ್ತು ವಸತಿ ಸಮಸ್ಯೆಗಳನ್ನು ಬಗೆಹರಿಸುವಂತೆ ಕಳೆದ ಎರಡೂವರೆ ವರ್ಷಗಳಿಂದ ವಿವಿಧ ಸಂಘಟನೆ ಸೇರಿದಂತೆ ಹಿರಿಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಹೋರಾಟ ನಡೆಸುತ್ತ ಬರಲಾಗುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಕೆಲ ಬಡವರಿಗೆ ಭೂಮಿ, ನಿವೇಶನ, ಮನೆಗಳು ದೊರೆತಿವೆ. ಆದರೆ, ಇನ್ನಿತರ ಜಿಲ್ಲೆಗಳ ಬಡವರಿಗೆ ಈ ಸೌಲಭ್ಯಗಳು ದೊರೆತಿಲ್ಲ. ಆದ್ದರಿಂದ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಹಲವು ದಶಕಗಳಿಂದ ಬಗೆಹರಿಯದೆ ಉಳಿದಿರುವ ನೂರಾರು ಭೂಮಿ, ವಸತಿ ಸಮಸ್ಯೆಗಳು ಕೆಲವು ಜಿಲ್ಲೆಗಳಲ್ಲಿವೆ. ಈ ಬಗ್ಗೆ ಸರ್ಕಾರದ ಆದೇಶಗಳಿದ್ದರೂ ಜಾರಿಯಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸರ್ಕಾರದ ಆದೇಶಗಳನ್ನು ಜಾರಿ ಮಾಡುವುದರಲ್ಲಿ ಜಿಲ್ಲಾ ತಾಲೂಕು ಮಟ್ಟದಲ್ಲಿ ಎದ್ದು ಕಾಣುತ್ತಿದೆ ಎಂದರು.
ಉನ್ನತ ಮಟ್ಟದ ಸಮಿತಿಯ ತೀರ್ಮಾನಗಳನ್ನು ಕೂಡಲೇ ಜಾರಿಮಾಡಬೇಕು. ವಿವಿಧ ಜಿಲ್ಲೆಗಳಲ್ಲಿ ಸಾಗುವಳಿಗೆ ಲಭ್ಯವಿರುವ ಸರ್ಕಾರಿ ಜಾಗಗಳಾದ ಗೋಮಾಳ, ಅಮೃತ್ ಮಹಲ್ ಕಾವಲ್ ಮುಂತಾದ ಭೂಮಿಗಳ ಸರ್ವೆ ನಡೆಸಬೇಕು. ಬೇಸಾಯ ಮಾಡಬಯಸುವ ಬಗ್ಗೆ ಭೂ ರಹಿತರಿಗೆ ತಲಾ ಎರಡು ಎಕರೆಯಂತೆ ಮಂಜೂರು ಮಾಡಬೇಕು. ಪಿತ್ರಾರ್ಜಿತ, ಇನ್ನಿತರ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇಂತಹ ಭೂಮಿಯನ್ನು ವಶಕ್ಕೆ ಪಡೆದು ಭೂ ರಹಿತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸದ್ಸಯರುಗಳಾದ ತೋಪಯ್ಯ, ತಿಮ್ಮಯ್ಯ ಸೇರಿದಂತೆ ಮತ್ತಿತರರಿದ್ದರು.