ಬೆಂಗಳೂರು, ನ.5- ಇದೊಂದು ಹೈಕೋರ್ಟ್‍ನಿಂದ ಛೀಮಾರಿ ಹಾಕಿಸಿಕೊಂಡ ಕಂಪೆನಿ. ಬೆಂಗಳೂರು ಮಹಾನಗರದ ಕಸ ಎತ್ತಲು ವಿಫಲವಾದ ಈ ಕಂಪೆನಿಗೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ತಮ್ಮ ಪ್ರಥಮ ಸಭೆಯಲ್ಲಿಯೇ ಪರಮಾಧಿಕಾರ ಚಲಾಯಿಸಿ ಮತ್ತೆ ಬರೋಬ್ಬರಿ 180 ಕೋಟಿ ರೂ. ಟೆಂಡರ್ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಎಂಎಸ್‍ಜಿಪಿ ಎಂಬ ಸಂಸ್ಥೆ ಬೆಂಗಳೂರು ಕಸ ಎತ್ತುವಲ್ಲಿ ವಿಫಲವಾಗಿದ್ದರಿಂದ ಹೈಕೋರ್ಟ್‍ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಇಂತಹ ಕಂಪೆನಿಗೆ ಬೆಂಗಳೂರು ಪೂರ್ವ ವಲಯದ ಸುಮಾರು 30 ವಾರ್ಡ್‍ಗಳ ಪ್ರತಿದಿನ 500 ಮೆಟ್ರಿಕ್‍ಟನ್ ಕಸ ಸಂಗ್ರಹಿಸಿ ಸಾಗಾಣಿಕೆ, ವಿಲೇವಾರಿ ಮಾಡುವ ಹೊಣೆಗಾರಿಕೆ ನೀಡಿರುವುದು ಪಾಲಿಕೆ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದಲ್ಲದೆ, ಈ ಕಂಪೆನಿಗೆ ಶೇ.1ರಷ್ಟು ಕಡಿಮೆ ಮಾಡಿ ಟೆಂಡರ್ ನೀಡುವಂತೆ 06.09.2017ರಂದು ಸರ್ಕಾರ ಆದೇಶ ನೀಡಿತ್ತು. ಅದರಂತೆ 19.03.2018ರಂದು ಪೂರ್ವ ವಲಯದ ಜಂಟಿ ಆಯುಕ್ತರು ಸರ್ವಜ್ಞನಗರ, ಶಾಂತಿನಗರ, ಜೆಸಿ ನಗರದ 30 ವಾರ್ಡ್‍ಗಳ ಕಸ ಸಂಗ್ರಹ ವಿಲೇವಾರಿ ಆದೇಶ ನೀಡಿದ್ದರು. ಕಾರ್ಯಾದೇಶ ಪಡೆದಿದ್ದ ಸಂಸ್ಥೆ ಕಸ ತೆಗೆಯದೆ ನಿರ್ಲಕ್ಷ್ಯ ಮಾಡಿತ್ತು.
ನಾಲ್ಕು ತಿಂಗಳಿನಿಂದ ಸರಿಯಾಗಿ ಕಸ ನಿರ್ವಹಣೆ ಮಾಡದ ಸಂಸ್ಥೆಯ ವಿರುದ್ಧ ಕೋರ್ಟ್‍ಗೆ ರಿಟ್ ಸಲ್ಲಿಸಲಾಗಿತ್ತು. ಹಲವು ತಾಂತ್ರಿಕ ಕಾರಣಗಳನ್ನು ಸಂಸ್ಥೆ ನ್ಯಾಯಾಲಯದ ಮುಂದೆ ಇಟ್ಟಿತ್ತು. ನ್ಯಾಯಾಲಯ ಕಸ ತೆಗೆಯಲು ನಿಮಗೆ ಸಮಸ್ಯೆಯಾದರೆ ಪೆÇಲೀಸರ ನೆರವು ಪಡೆದು ನೆರವಿನೊಂದಿಗೆ ಕಸ ತೆಗೆಯಲು ಸೂಚಿಸಿತ್ತು. ಅಲ್ಲದೆ, ಮತ್ತೆ ಕಸ ತೆಗೆಯಲು ವಿಫಲವಾದರೆ ನೀಡಿರುವ ಟೆಂಡರ್ ವಾಪಸ್ ಪಡೆಯಲು ಖಡಕ್ ಆದೇಶವನ್ನು 11.07.2018ರಂದು ನೀಡಿತ್ತು. ಮೂರು ತಿಂಗಳೊಳಗೆ ಕಸ ತೆಗೆಯದಿದ್ದರೆ ಟೆಂಡರ್ ಸ್ಥಗಿತಗೊಳ್ಳಬೇಕಾಗಿತ್ತು.
ಕೋರ್ಟ್ ಆದೇಶ ನೀಡಿದ್ದರೂ ಈ ಸಂಸ್ಥೆ ಕಸ ತೆಗೆಯಲು ಸಂಪೂರ್ಣ ವಿಫಲವಾಗಿತ್ತು, ಆದೇಶವನ್ನು ಉಲ್ಲಂಘಿಸಿತ್ತು. ಇಂತಹ ಸಂಸ್ಥೆಗೆ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ 180 ಕೋಟಿ ರೂ.ಗಳ ಟೆಂಡರ್ ನೀಡಲು ನಿರ್ಣಯ ಮಾಡಿದೆ.
ಮೇಯರ್ ತಮ್ಮ ಪರಮಾಧಿಕಾರ ಬಳಸಿ ಈ ಸಂಸ್ಥೆಗೆ ಟೆಂಡರ್ ನೀಡಿರುವುದು ಸಾಕಷ್ಟು ಅನುಮಾನ ಮೂಡಿಸಿದೆ.