ಚನ್ನಪಟ್ಟಣ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಕುಟುಂಬದಿಂದ ಸ್ಪರ್ಧಿಸುತ್ತಿಲ್ಲ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಮಾ.7-ಚನ್ನಪಟ್ಟಣ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಕುಟುಂಬದ ಯಾರೊಬ್ಬರೂ ಆಭ್ಯರ್ಥಿಯಾಗಿ ಸ್ಪರ್ಧಿಸುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದರು.
ವಿಕಾಸ ಪರ್ವದ ಅಂಗವಾಗಿ ಚಿಕ್ಕಲ್ಲಸಂದ್ರದಲ್ಲಿ ಬಹಿರಂಗಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಹುರುಳಿಲ್ಲ. ನಮ್ಮ ಕುಟುಂಬದಿಂದ ಚನ್ನಪಟ್ಟಣ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರೂ ಸ್ಪರ್ಧಿಸುವುದಿಲ್ಲ. ಒಂದು ವೇಳೆ ನಮ್ಮ ಕುಟುಂಬದ ಮೂರನೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವ ಸನ್ನಿವೇಶ ಒದಗಿದರೆ ಸ್ವತಃ ತಾವೇ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.
ಈ ಸಂಬಂಧ ಕಾರ್ಯಕರ್ತರಲ್ಲೂ ಮನವಿ ಮಾಡುತ್ತೇನೆ. ಸಣ್ಣ ಸಣ್ಣ ವಿಚಾರಗಳಿಂದಾಗಿ ಟೀಕೆಗೆ ಅವಕಾಶ ಮಾಡಿಕೊಡಬೇಡಿ, ಪಕ್ಷದ ವಿರುದ್ಧ ಮಾಡಲಾಗುವ ಟೀಕೆಗಳಿಂದ ಹೊರಗುಳಿಯಲು ಈ ನಿರ್ಧಾರ ಕೈಗೊಂಡಿದ್ದೇನೆ. ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹಾಕಿರುವುದು ನಿಜ. ಆದರೆ ನಮ್ಮ ನಿರ್ಧಾರಕ್ಕೆ ಸಹಕಾರ ನೀಡಿ ಎಂದು ಕೋರಿದರು.
ಮೈತ್ರಿ ನಿರ್ಧಾರವಿಲ್ಲ:
ಬಿಬಿಎಂಪಿಯಲ್ಲಿ ಏರ್ಪಟ್ಟಿರುವ ಮೈತ್ರಿ ಹಿಂಪಡೆಯುವ ಸಂಬಂಧ ಇನ್ನೂ ನಿರ್ಧಾರವಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಹಿಳಾ ದಿನಾಚರಣೆಯನ್ನು ಕಾಟಾಚಾರಕ್ಕಾಗಿ ಮಾಡದೆ, ಮಹಾತ್ಮಗಾಂಧಿ ಆಶಯದಂತೆ ಮಧ್ಯರಾತ್ರಿಯಲ್ಲಿಯೂ ಮಹಿಳೆಯರು ನಿರ್ಭಯವಾಗಿ ಓಡಾಡುವಂತಹ ಪೂರಕ ವಾತಾವರಣ ಕಲ್ಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಶೋಕ್ಖೇಣಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ ಟೀಕೆಗಳ ಸುರಿಮಳೆಗೈಯ್ಯುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಬಿಎಂಐಸಿ ಯೋಜನೆ ರದ್ದು ಮಾಡುವಂತೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಬಿಜೆಪಿಯವರು ಸಭೆಯನ್ನೇ ಬಹಿಷ್ಕರಿಸಿ ನೈಸ್ ಕಂಪೆನಿಯನ್ನು ಬೆಂಬಲಿಸಿದ್ದರು. ಅವರ ಅವಧಿಯಲ್ಲಿಯೇ ಹೊಸಕೆರೆ ಹಳ್ಳಿ ಭಾಗದಲ್ಲಿದ್ದ ಸಣ್ಣ ಸಣ್ಣ ಮನೆಗಳವರನ್ನು ಒಕ್ಕಲೆಬ್ಬಿಸಿ ನೈಸ್ ಕಂಪೆನಿಗೆ ಭೂಮಿ ಒದಗಿಸಿದ್ದರು. ಈಗ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಇವರಿಗೆ ನೈತಿಕತೆ ಎಲ್ಲಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್, ಬಿಜೆಪಿ ರಾಜ್ಯದ ಆಸ್ತಿಯನ್ನು ಉಳಿಸುವ ಬದ್ಧತೆ ಹೊಂದಿಲ್ಲ. ಬದಲಿಗೆ ಲೂಟಿ ಹೊಡೆದಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಆರೋಪಿ ಶಶಿಕಲಾ ಅವರಿಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ಒಂದು ವೇಳೆ ಅವರು ಈ ಕುರಿತಂತೆ ಸೂಚನೆ ನೀಡಿದ್ದರೆ, ಅವರೇ ಇದಕ್ಕೆ ಹೊಣೆಯಾಗುತ್ತಾರೆ ಎಂದು ಹೇಳಿದರು.
ಆಡಳಿತ ಯಂತ್ರ ದುರ್ಬಲಗೊಂಡಿದೆ. ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎಂಬಂತಾಗಿದೆ. ಇದು ಆಡಳಿತಾರೂಢ ಸರ್ಕಾರದ ಕೆಟ್ಟ ಆಡಳಿತವನ್ನು ಸೂಚಿಸುತ್ತದೆ ಎಂದು ಟೀಕಿಸಿದರು.