ಬಿಜೆಪಿಯ ವರಿಷ್ಠ ನಾಯಕರ ಮೌನ ಆ ಪಕ್ಷದ ಮಾನ ಉಳಿಸಿದೆ: ಸಿಎಂ

ಬಿಜೆಪಿಯ ವರಿಷ್ಠ ನಾಯಕರ ಮೌನ ಆ ಪಕ್ಷದ ಮಾನ ಉಳಿಸಿದೆ: ಸಿಎಂ
ಬೆಂಗಳೂರು, ಮಾ.7- ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರು ಮಾತನಾಡುವ ಸ್ಥಿತಿಯಲ್ಲಿದ್ದಿದ್ದರೆ, ಮಾಜಿ ಉಪ ಪ್ರಧಾನಿ ಲಾಲ್‍ಕೃಷ್ಣ ಅಡ್ವಾಣಿ ಅವರಿಗೆ ಮಾತನಾಡಲು ಅವಕಾಶ ನೀಡಿದರೆ ನರಹಂತಕರು ಯಾರು ಎಂಬುದನ್ನು ಅವರೇ ಹೇಳುತ್ತಿದ್ದರು. ಇಬ್ಬರು ನಾಯಕರ ಮೌನ ಬಿಜೆಪಿಯ ಮಾನ ಉಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರ ನರಹಂತಕ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಮಂಗಳೂರಿನಲ್ಲಿ ನಡೆದ ಜನಸುರಕ್ಷತಾ ಯಾತ್ರೆಯ ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ, ಸಂಸದ ನಳಿನ್‍ಕುಮಾರ್ ಕಟಿಲ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸಿದ್ದರಾಮಯ್ಯ ಸರ್ಕಾರವನ್ನು ನರಹಂತಕ ಸರ್ಕಾರ ಎಂದು ಮಾಡಿದ್ದ ಆರೋಪಕ್ಕೆ ಟ್ವಿಟ್‍ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ಬಿಜೆಪಿಯ ವರಿಷ್ಠ ನಾಯಕರ ಮೌನ ಆ ಪಕ್ಷದ ಮಾನ ಉಳಿಸಿದೆ. ಅವರು ಮಾತನಾಡುವಂತಿದ್ದರೆ ನರಹಂತಕರು ಯಾರು ಎಂಬುದನ್ನು ಅವರೇ ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ.
ನಾವು ಮನುಷ್ಯ ಪ್ರೇಮಿಗಳು. ಅವರು ಮನುಷ್ಯ ವಿರೋಧಿಗಳು. ಇದರಿಂದಾಗಿಯೇ ನಾವು ಹೀಗೆ. ಅವರು ಹಾಗೆ. ಉಂಡವನು ಶತ್ರುವಾದರೂ ಅವರ ಹೊಟ್ಟೆ ತಣ್ಣಗಿರಲಿ. ನಮ್ಮ ಭಾವನೆ ಎಂದು ಮತ್ತೊಂದು ಟ್ವಿಟ್‍ನಲ್ಲಿ ಸಿಎಂ ತಿಳಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಿಮ್ಮ ಸ್ವಂತ ಕ್ಷೇತ್ರ ಗೋರಖ್‍ಪುರದ ಸರ್ಕಾರಿ ಆಸ್ಪತ್ರೆಗಳಲ್ಲಿ ನೀವು ಅಧಿಕಾರಕ್ಕೆ ಬಂದ ದಿನದಿಂದ 1250ಕ್ಕೂ ಹೆಚ್ಚು ಪುಟ್ಟ ಕಂದಮ್ಮಗಳು ಪ್ರಾಣ ಕಳೆದುಕೊಂಡಿವೆ. ಯಾರನ್ನು ನರಹಂತಕ ಎಂದು ಕರೆಯೋಣ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರ ನಾಲಿಗೆ ಅವರ ಸಂಸ್ಕøತಿಯನ್ನು ಬಿಂಬಿಸುತ್ತದೆ. ಅವರ ಮಟ್ಟಕ್ಕೆ ಇಳಿದು ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ ಎಂದು ಬಸವಣ್ಣನವರ ವಚನವನ್ನು ತಮ್ಮ ಟ್ವಿಟ್‍ನಲ್ಲಿ ಸಿದ್ದರಾಮಯ್ಯನವರು ಉಲ್ಲೇಖಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ