ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 13 ಮಂದಿಯನ್ನು ಕೊಂದಿದ್ದ ಅವನಿ ಎಂಬ ನರಭಕ್ಷಕ ಹೆಣ್ಣು ಹುಲಿಯನ್ನು ಮಹಾರಾಷ್ಟ್ರದ ಯಾವತ್ಮಲ್ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ರಾತ್ರಿ ಹತ್ಯೆ ಮಾಡಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿಗೆ ಆನ್ಲೈನ್ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅವನಿ ಎಂಬ ಹೆಣ್ಣು ಹುಲಿಗೆ 10 ತಿಂಗಳ ಎರಡು ಮರಿಗಳು ಇದ್ದವು.
150 ಸಿಬ್ಬಂದಿ, ಆನೆಗಳು ಹಾಗೂ ನುರಿತ ಪತ್ತೆಗಾರರು ಹಾಗೂ ಶೂಟರ್ಗಳು ಸುಮಾರು ಮೂರು ತಿಂಗಳು ಅವನಿ ಹುಲಿ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ವಿಶೇಷ ತಂತ್ರಜ್ಞಾನದ ಸಹಾಯವನ್ನು ಪಡೆದುಕೊಳ್ಳಲಾಗಿತ್ತು. ಕ್ಯಾಮರಾ, ಡ್ರೋಣ್, ತರಬೇತಿ ಪಡೆದ ಶ್ವಾನಗಳನ್ನು ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಿವಾದಾತ್ಮಕ ಬೇಟೆಗಾರ ಶಫತ್ ಅಲಿ ಖಾನ್ ಅವರನ್ನು ಅರಣ್ಯ ಇಲಾಖೆ ಹುಲಿ ಹತ್ಯೆಗೆ ಬಳಸಿಕೊಂಡಿತ್ತು.
2012ರಲ್ಲಿ ಯಾವತ್ಮಲ್ ಅರಣ್ಯ ಪ್ರದೇಶದಲ್ಲಿ ಮೊದಲ ಬಾರಿಗೆ ಅವನಿ ಕಾಣಿಸಿಕೊಂಡಿದ್ದಳು. ಈ ಪ್ರದೇಶದಲ್ಲಿ ಸಾವಿಗೀಡಾದ 13 ಮಂದಿಯಲ್ಲಿ 5 ಮಂದಿ ಅವನಿಯಿಂದಲೇ ಸಾವಿಗೀಡಾದ್ದು, ಡಿಎನ್ಎ ಪುರಾವೆಗಳಿಂದ ದೃಢಪಟ್ಟಿತ್ತು. ಈ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮತ್ತೊಂದು ಗಂಡು ಹುಲಿ ಇರುವುದು ಪತ್ತೆಯಾಗಿದೆ. ಒಂದು ಮೃತದೇಹದಲ್ಲಿ ಆ ಗಂಡು ಹುಲಿಯ ಡಿಎನ್ಎ ಪತ್ತೆಯಾಗಿತ್ತು.
ಕಳೆದ ತಿಂಗಳು ಬಾಂಬೆ ಹೈಕೋರ್ಟ್ನ ನಾಗಪುರ ಪೀಠದ ಮುಂದೆ, ಹುಲಿಯನ್ನು ಕೊಲ್ಲುವುದಕ್ಕೆ ತಡೆ ನೀಡಿ, ಜೀವಂತವಾಗಿ ಹಿಡಿಯುವಂತೆ ಅರ್ಜಿ ಸಲ್ಲಿಸಲಾಗಿತ್ತು.