ಮತದಾನ ಬಹಿಷ್ಕರಿಸಿದ ಬಳ್ಳಾರಿಯ ಹರಗಿನಡೋಣಿ ಗ್ರಾಮ

ಬಳ್ಳಾರಿ: ಆಹಾರವಿಲ್ಲದೇ ಬದುಕಬಹುದೇನೋ? ಆದರೆ ನೀರಿಲ್ಲದೇಜೀವಿಸೋಕೆ ಆಗೋದೇ ಇಲ್ಲ. ಕೊನೆಪಕ್ಷ ಸಾಯೋರಿಗೆ ಮೂರು ಹನಿ ನೀರು ಹಾಕಲು ಗ್ರಾಮದಲ್ಲಿ ಕುಡಿಯೋಕೆ ನೀರು ಸಿಗ್ತಿಲ್ಲ. ನೀರು ತರಲು ಹೋಗಿ ಒಬ್ಬ ಸತ್ತೇ ಹೋದ. ಹೋರಾಟ ಮಾಡಲು ಹೋಗಿ ವಿದ್ಯಾರ್ಥಿ ತನ್ನ ಕಾಲೇ ಕಳೆದುಕೊಂಡ. ಆದರೂ ಗ್ರಾಮಕ್ಕೆ ನೀರು ಬರಲೇ ಇಲ್ಲ. ಇಂಥ ನತದೃಷ್ಟ ಹಳ್ಳಿಯ ಗ್ರಾಮಸ್ಥರೀಗ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ.
ಈ ಗ್ರಾಮದ‌ ಹೆಸರಿನಲ್ಲೇ ದೋಣೆಯಿದೆ. ಆದರೆ ಈ ಗ್ರಾಮದಲ್ಲಿ ಯಾವುದೇ ನೀರು ಹರಿಯುವುದಿಲ್ಲ. ಹನಿ ನೀರಿಗಾಗಿ ಇಲ್ಲಿನ ಹೆಂಗಳೆಯರು ಜಡೆ ಹಿಡಿದುಕೊಂಡು ಜಗಳವಾಡೋದು ತಪ್ಪಿಲ್ಲ. ಟ್ಯಾಂಕರ್ ನೀರಿಗಾಗಿ ದಿನನಿತ್ಯ ಬಡಿದೋಡೋದು ಇಲ್ಲಿನ‌ ಗ್ರಾಮಸ್ಥರ ನಿತ್ಯಕರ್ಮ. ಸತ್ತರೂ ಬಾಯಿಗೆ ಗಂಗಾಜಲ ಹಾಕಲು ನೀರು ಸಿಗ್ತಿಲ್ಲ. ಕಳೆದೊಂದು ದಶಕದಿಂದ ನೀರಿಗಾಗಿ ಪರದಾಡುತ್ತಿರುವ ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ ಮುಂದುವರೆದಿದೆ. ಇಲ್ಲಿನ ಜನರು ಟ್ಯಾಂಕರ್ ನೀರನ್ನೇ ಅವಲಂಬಿಸಿದ್ಧಾರೆ. ಒಮ್ಮೆ ಸುರೇಶ್ ಎಂಬ ವ್ಯಕ್ತಿ ನೀರು ತರಲು ಹೋಗಿ ಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ನೀರಿಗಾಗಿ ಹೋರಾಟಕ್ಕೆ ಗ್ರಾಮದ ವಿದ್ಯಾರ್ಥಿ ಶಶಿಕುಮಾರ್ ತನ್ನ ಎಡಗಾಲು ಸಂಪೂರ್ಣವಾಗಿ ಕಾಲ ಕಳೆದುಕೊಂಡುಬಿಟ್ಟಿದ್ಧಾನೆ. ಆದರೂ ಊರಿಗೆ ಗಂಗೆ ಹರಿದುಬರಲಿಲ್ಲ.  ಇದೀಗ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಳ್ಳಾರಿ ಲೋಕಸಭಾ ಉಪ ಚುನಾವಣೆ ಮತದಾನವನ್ನೇ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಬಳ್ಳಾರಿ ತಾಲೂಕಿನ ಬೆಳಗಲ್ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹರಗಿನಡೋಣಿ ಗ್ರಾಮದಲ್ಲಿ 2100 ಮತದಾರರಿದ್ದಾರೆ. ಈ ಮೊದಲು ಗ್ರಾಮಸ್ಥರು ಬೋರ್ ನೀರು ಬಳಸುತ್ತಿದ್ದರಾದರೂ ಅಂರ್ತಜಲ ಕಡಿಮೆಯಾಗುತ್ತಿದ್ದಂತೆ ಬೋರ್​ಗಳು ಬತ್ತಿಹೋಗಿವೆ. ಈ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಸುತ್ತಲೂ ಯಾವುದೇ ಕೆರೆಗಳಿಲ್ಲ. ಸದ್ಯ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. 800ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದಲ್ಲಿ ಟ್ಯಾಂಕರ್ ನೀರಿಗಾಗಿ ಬಡಿದಾಡೋದು ತಪ್ಪಿಲ್ಲ. ಈ ಕಾರಣಕ್ಕಾಗಿಯೇ ಹೆಂಗಳೆಯರು ಖಾಲಿ‌ ಕೊಡ ಹಿಡಿದು ಇವತ್ತು ದಿಢೀರ್ ಪ್ರತಿಭಟನೆ ಮಾಡಿದರು. ಚುನಾವಣೆ ದಿನ ಮತದಾನ ಮಾಡದೇ‌ ಬಹಿಷ್ಕಾರ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ.
ಇದುವರೆಗೂ ಹರಗಿ‌ನಡೋಣಿ ಗ್ರಾಮಕ್ಕೆ ಕೆರೆಯನ್ನು ನಿರ್ಮಿಸಿಲ್ಲ. ನೀರಿಗೆ ಶಾಶ್ವತವಾಗಿ ಕೆರೆ ನಿರ್ಮಿಸಬೇಕು ಎಂದು ಮತದಾನ ಬಹಿಷ್ಕರಿಸಿ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಆಶ್ವಾಸನೆ, ಸರ್ಕಾರದ ನಿರ್ಲಕ್ಷ್ಯಕ್ಕೆ ಹರಗಿನಡೋಣಿ ಗ್ರಾಮಸ್ಥರು ನೀರಿಗಾಗಿ ದಿನನಿತ್ಯ ಬಡಿದಾಡೋದು, ಅಮಾಯಕ ಜೀವಗಳು ಬಲಿಯಾಗೋದನ್ನು ತಪ್ಪಿಸಬೇಕಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ