ಬೆಂಗಳೂರು, ಅ.31- ಕಳೆದ ಹದಿನೈದು ದಿನಗಳಿಂದ ರಂಗೇರಿದ್ದ ಉಪ ಚುನಾವಣಾ ಕಣದ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳಲಿದೆ.ಇನ್ನೇನಿದ್ದರೂ ಮನೆ ಮನೆಗೆ ತೆರಳಿ ಮತಯಾಚಿಸಬೇಕು.
ತೀವ್ರ ಕುತೂಹಲ ಕೆರಳಿಸಿರುವ ಐದು ಕ್ಷೇತ್ರಗಳ ಉಪ ಚುನಾವಣೆಯ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಹಾಗೂ ಭದ್ರತೆ ಮಾಡಿಕೊಂಡಿದೆ. ಬಹಿರಂಗ ಸಭೆಯಲ್ಲಿ ಭಾರೀ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದ್ದವು.ವೈಯಕ್ತಿಕ ಟೀಕೆ, ಟಿಪ್ಪಣಿಗಳು ಕೂಡ ಮಾರ್ಧನಿಸಿದ್ದವು.ಅಬ್ಬರಿಸಿ ಬೊಬ್ಬಿರಿದ ರಾಜಕೀಯ ನಾಯಕರ ಬಹಿರಂಗ ವಾಕ್ಸಮರ ಅಂತ್ಯಗೊಂಡಿದೆ.ರಂಗು ಪಡೆದಿರುವ ಚುನಾವಣಾ ಕಣದಲ್ಲಿ ಮತದಾರರು ಮೌನವಾಗಿ ಎಲ್ಲವನ್ನೂ ಗಮನಿಸುತ್ತಿದ್ದು, ನ.3ರಂದು ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. ಕ್ಷೇತ್ರದ ಹೊರಗಿನವರು ಜಾಗ ಖಾಲಿ ಮಾಡುವಂತೆ ಆಯೋಗ ಈಗಾಗಲೇ ಸೂಚಿಸಿದ್ದು, ನಾಳೆ ಬೆಳಗ್ಗೆಯೊಳಗೆ ಕ್ಷೇತ್ರದ ಮತದಾರರಲ್ಲವರು ಕ್ಷೇತ್ರಬಿಟ್ಟು ತೆರಳಬೇಕಾಗಿದೆ.
ನವೆಂಬರ್ 3ರಂದು ನಡೆಯುವ ಮಂಡ್ಯ, ಬಳ್ಳಾರಿ, ಶಿವಮೊಗ್ಗ ಲೋಕಸಭೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆ ಉಪಚುನಾವಣೆಗೆ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ನವೆಂಬರ್ 2ರಂದು ಸಿಬ್ಬಂದಿ ಮಸ್ಟರ್ ಕೇಂದ್ರಗಳಿಂದ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗೆ ತೆರಳಲಿದ್ದಾರೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲಾಗಿದೆ.
ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಕೂಡ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಬಿರುಸಿನ ಪ್ರಚಾರ ನಡೆಸಿದರು.ಕೊನೆಯ ಕ್ಷಣದವರೆಗೂ ಮತದಾರರ ಮನವೊಲಿಸಲು ನಾನಾ ಕಸರತ್ತುಗಳು, ಆಶ್ವಾಸನೆಗಳನ್ನು ನೀಡಲಾಯಿತು.
ಬಳ್ಳಾರಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಮುಖಂಡರಾದ ಕೆ.ಸಿ.ಕೊಂಡಯ್ಯ, ಸ್ಥಳೀಯ ಶಾಸಕರು, ಕಾಂಗ್ರೆಸ್ ಮುಖಂಡರು, ಮೈತ್ರಿ ಪಕ್ಷದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಅಬ್ಬರದ ಪ್ರಚಾರ ನಡೆಸಿದರು.ಭಾರಿ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖಂಡರು, ವಿ.ಎಸ್.ಉಗ್ರಪ್ಪ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.ಬಳ್ಳಾರಿಗೆ ಬಿಜೆಪಿ ಕೊಡುಗೆ ಶೂನ್ಯವಾಗಿದೆ.ಬಿಜೆಪಿಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ.ಬಿಜೆಪಿಯನ್ನು ಸೋಲಿಸಿ ಜನರನ್ನು ಭಯಮುಕ್ತಗೊಳಿಸಬೇಕು ಎಂದು ಮುಖಂಡರು ಕರೆ ನೀಡಿದರು.
ಇತ್ತ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ಶಾಸಕ ಶ್ರೀರಾಮುಲು ಬಿರುಸಿನ ಪ್ರಚಾರ ನಡೆಸಿದರು.ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಗಲಿವೆ. ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಪರ ಇಂದು ಕೂಡ ಮತಯಾಚಿಸಿ, ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು.ನನಗೆ ಕ್ಷೇತ್ರದ ಜನರು ನೀಡಿರುವ ಮತಕ್ಕಿಂತ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಶಾಸಕ ಕೆ.ಎಸ್.ಈಶ್ವರಪ್ಪ, ಸ್ಥಳೀಯ ಬಿಜೆಪಿ ಮುಖಂಡರು ರಾಘವೇಂದ್ರ ಪರ ಪ್ರಚಾರ ನಡೆಸಿದರು.
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಉಭಯ ಪಕ್ಷಗಳ ಮುಖಂಡರು ಇಂದು ಕೂಡ ಬಿರುಸಿನ ಪ್ರಚಾರ ನಡೆಸಿ, ಮತಯಾಚಿಸಿದರು.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರ ಪರ ಜೆಡಿಎಸ್, ಕಾಂಗ್ರೆಸ್ ಮುಖಂಡರು ಪ್ರಚಾರ ನಡೆಸಿದರೆ, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರವಾಗಿ ಮುಖಂಡರಾದ ಆರ್.ಅಶೋಕ್ ಮತ್ತಿತರ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ಜಮಖಂಡಿಯಲ್ಲಿ ಮೈತ್ರಿ ಅಭ್ಯರ್ಥಿ ಆನಂದ್ ನ್ಯಾಮೇಗೌಡ ಪರ ಅಬ್ಬರದ ಪ್ರಚಾರ ನಡೆಯಿತು.ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರವಾಗಿ ಬಿಜೆಪಿ ನಾಯಕರು ಬಿರುಸಿನ ಪ್ರಚಾರ ನಡೆಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿರುವ ರಾಮನಗರ ಕ್ಷೇತ್ರದಲ್ಲಿ ಇಂದು ಕೂಡ ಅಬ್ಬರದ ಪ್ರಚಾರ ನಡೆಯಿತು.ಅನಿತಾ ಕುಮಾರಸ್ವಾಮಿ ಪರ ಡಿ.ಕೆ.ಸುರೇಶ್ ಸೇರಿದಂತೆ ಜೆಡಿಎಸ್, ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ಅತ್ತ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಪರವಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತಿತರ ಸ್ಥಳೀಯ ನಾಯಕರು ಮತಯಾಚಿಸಿದರು.
ಒಟ್ಟಾರೆ ಈ ಉಪ ಚುನಾವಣೆ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿದ್ದರೆ, ಬಿಜೆಪಿಗೂ ಕೂಡ ಇದು ಸವಾಲಾಗಿದೆ. ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಮೈತ್ರಿ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದ್ದು, ಸುಭದ್ರ ಸರ್ಕಾರಕ್ಕೆ ನಾಂದಿಯಾಗುವುದರ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗುವ ಸಾಧ್ಯತೆ ಇದೆ.
ಬಿಜೆಪಿ ಗೆಲುವು ಸಾಧಿಸಿದರೆ ಸರ್ಕಾರದ ಬುಡ ಅಲ್ಲಾಡುವ ಸಾಧ್ಯತೆ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.ಏನಾಗುತ್ತದೆ ಎಂಬುದನ್ನು ನವೆಂಬರ್ 6ರವರೆಗೆ ಕಾದುನೋಡಬೇಕು.
ನ. 3ರಂದು ದ್ವಿಚಕ್ರ ವಾಹನಗಳ ಹರಾಜು ಹಾಕಲಿರುವ ರಾಮಮೂತಿ ನಗರ ಪೊಲೀಸರು:
ಬೆಂಗಳೂರು, ಅ.31-ರಾಮಮೂರ್ತಿ ನಗರ ಪೆÇಲೀಸ್ ಠಾಣೆಯ ಆವರಣದಲ್ಲಿ ನ.3 ರಂದು ಸಾರ್ವಜನಿಕವಾಗಿ 51 ದ್ವಿಚಕ್ರವಾಹನಗಳನ್ನು ಹರಾಜು ಹಾಕಲಾಗುತ್ತದೆ.
ಹತ್ತನೇ ಎಸಿಎಂಎಂ ನ್ಯಾಯಾಲಯದ ಆದೇಶದ ಮೇರೆಗೆ ಅಂದು ಬೆಳಘ್ಗೆ 51 ದ್ವಿಚಕ್ರ ವಾಹನಗಳನ್ನು ಹರಾಜು ಮಾಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ಇನ್ಸ್ಪೆಕ್ಟರ್ 9480801224 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.