ಬೆಂಗಳೂರು,ಅ.31-ರಾಜ್ಯದಲ್ಲಿ ಲೋಕಸಭಾ ಹಾಗೂ ವಿಧಾನಸಭೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಬಹುನಿರೀಕ್ಷಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ನ.6ರಂದು ಮಂಡ್ಯ, ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭೆ ಹಾಗೂ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಳ್ಳಲಿದೆ.
ನಂತರವೇ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರ ಪಟ್ಟಿಯನ್ನು ಪ್ರಕಟಗೊಳಿಸಲಿದೆ ಎಂದು ತಿಳಿದುಬಂದಿದೆ. ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ಕರೆಯಲಾಗಿತ್ತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಡಾ.ಜಯಮಾಲ, ವಾರ್ತಾ ಇಲಾಖೆ ನಿರ್ದೇಶಕರು, ಸಮಿತಿ ಸದಸ್ಯರು ಸೇರಿದಂತೆ ಮತ್ತಿತರರು ಸಭೆ ಸೇರಿ ಪಟ್ಟಿಯನ್ನು ಪ್ರಕಟಗೊಳಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ನೀತಿ ಸಂಹಿತೆ ಜಾರಿ ಇರುವುದರಿಂದ ಉಲ್ಲಂಘನೆಯಾಗಬಾರದೆಂಬ ಕಾರಣಕ್ಕಾಗಿ ಸರ್ಕಾರ ಮುಂದೂಡಿದೆ ಎಂದು ತಿಳಿದುಬಂದಿದೆ. ನಾಳೆ 63ನೇ ಕನ್ನಡ ರಾಜ್ಯೋತ್ಸವ ರಾಜ್ಯಾದ್ಯಂತ ನಡೆಯಲಿದೆ. ಕಲೆ, ಸಾಹಿತ್ಯ, ಸಂಗೀತ, ವೈದ್ಯಕೀಯ, ಸಾಮಾಜಿಕ, ರಂಗಭೂಮಿ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸುವುದು ಸಂಪ್ರದಾಯವಾಗಿದೆ.
ಆದರೆ ಇದೇ ಮೊದಲ ಬಾರಿಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಉಪಚುನಾವಣೆ ನಡೆಯುತ್ತಿರುವ ಕಾರಣ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆಯಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.
ಈ ಬಾರಿ 63ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನಲೆಯಲ್ಲಿ ಇಷ್ಟೇ ಸಂಖ್ಯೆಯ ದಿಗ್ಗಜರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ. ತಾಯಿ ಭುವನೇಶ್ವರಿಯ ಪ್ರತಿಮೆಯನ್ನೊಳಗೊಂಡ ಪ್ರಶಸ್ತಿ, ಫಲಕ, ಪ್ರಮಾಣ ಪತ್ರ, ಶಾಲು ಹಾಗೂ ನಗದು ನೀಡಿ ಸನ್ಮಾನಿಸಲಾಗುತ್ತಿತ್ತು.
ಮೂಲಗಳ ಪ್ರಕಾರ ನವೆಂಬರ್ 2ನೇ ವಾರದಲ್ಲಿ ಸರ್ಕಾರ ಪ್ರಶಸ್ತಿ ಪುರಸ್ಕøತರ ಪಟ್ಟಿಯನ್ನು ಪ್ರಕಟಿಸಿ ನಂತರವೇ ಸಮಾರಂಭವನ್ನು ನಿಗದಿಪಡಿಸಲಿದೆ ಎಂದು ತಿಳಿದುಬಂದಿದೆ.