ರಾಜಕೀಯ ಕ್ಷೇತ್ರಕ್ಕೆ ಬಂದ ಮೇಲೆಯೂ ಬುದ್ಧಿ ಕಲಿಯದ ಸಂಸದ ಪ್ರತಾಪ್ ಸಿಂಹ: ಕಾಂಗ್ರೆಸ್ ತಿರುಗೇಟು

ಬೆಂಗಳೂರು, ಅ.29- ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್ ಅವರು ಕೆಲಸಕ್ಕೆ ಬಾರದವರು ಎಂದಿರುವ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.

ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಅವರು ಬರವಣಿಗೆ ಮುಖಾಂತರ ರಾಜ್ಯದಲ್ಲಿ ಕೋಮುಗಲಭೆ ಪ್ರಚೋದನೆ ನೀಡಿ ರಾಜಕೀಯ ಕ್ಷೇತ್ರಕ್ಕೆ ಬಂದ ಮೇಲೆಯೂ ಬುದ್ಧಿ ಕಲಿಯಲಿಲ್ಲ. ಗುಂಡೂರಾವ್ ಅವರ ಸಾಧನೆ ತಿಳಿಯದೆ ಅನಗತ್ಯ ಟೀಕೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಗಣಿ ಲೂಟಿ ಹಣದಿಂದ ಶಾಸಕರನ್ನು ಖರೀದಿ ಮಾಡಿ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಪಕ್ಷ ನಿಮ್ಮದು ಎಂದು ಕಾಂಗ್ರೆಸ್ ಮುಖಂಡರಾದ ಜಿ.ಜನಾರ್ದನ್, ಎಸ್.ಮನೋಹರ್, ಸಲೀಮ್ ಮುಂತಾದವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಉಗ್ರಪ್ಪನವರ ಸತ್ಯಶೋಧನಾ ವರದಿಯಿಂದ ಗಣಿ ಅಕ್ರಮ ಮಾಡಿರುವವರು ಜೈಲು ಪಾಲಾಗಬೇಕಾಯಿತು.

ದಿನೇಶ್ ಗುಂಡೂರಾವ್ ಅವರು ಹಂತ ಹಂತವಾಗಿ ರಾಜಕೀಯದಲ್ಲಿ ಬೆಳೆದು ಐದು ಬಾರಿ ಶಾಸಕರಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬರವಣಿಗೆಯಲ್ಲಿ ಕೋಮುವಾದ ಯುವಕರನ್ನು ದಾರಿತಪ್ಪಿಸಿ ನಿಮ್ಮ ಹಾಗೆ ರಾಜಕೀಯ ಬೇಳೆ ಬೇಯಿಸಿಕೊಂಡಿಲ್ಲ. ಕೊಡಗು ಭಾಗದಲ್ಲಿ ಭಾರೀ ಮಳೆಯಾದಾಗ ನೀವು ಜನರಿಗೆ ಸ್ಪಂದಿಸಲಿಲ್ಲ. ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ