ಬೆಂಗಳೂರು,ಅ.29-ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಕರ್ನಾಟಕ ರಾಜ್ಯ ಸಮಿತಿ ಸಹಯೋಗದಲ್ಲಿ ಇದೇ 31ರಂದು ಬೆಳಗ್ಗೆ 10.30ಕ್ಕೆ ಡಬಲ್ರೋಡ್ನಲ್ಲಿರುವ ಕೆ.ಎಚ್.ಪಾಟೀಲ್ ಸಭಾಂಗಣದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಸಂಚಾಲಕ ಜಿ.ಸಿ.ಬಯ್ಯರೆಡ್ಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರೆಡ್ಡಿ ನೆರವೇರಿಸಲಿದ್ದಾರೆ.
ರೈತರು, ಕೃಷಿ ಕೂಲಿಕಾರರಿಗೆ ಅಗತ್ಯವಿರುವಷ್ಟು ಕಡಿಮೆ ಬಡ್ಡಿಯ ಬ್ಯಾಂಕ್ ಸಾಲ ನೀಡಬೇಕು ಹಾಗೂ ವಿಶೇಷ ಸಂದರ್ಭಗಳಲ್ಲಿ ಸಾಲಮನ್ನಾವನ್ನು ಖಾತ್ರಿಗೊಳಿಸುವ ಋಣಮುಕ್ತ ಕಾಯ್ದೆಗಳನ್ನು ಲೋಕಸಭೆ ವಿಶೇಷ ಅಧಿವೇಶನ ಕರೆದು ಅಂಗೀಕಾರ ಮಾಡಬೇಕೆಂದು ಆಗ್ರಹಿಸಿ ನ.28ರಿಂದ 30ರವರೆಗೆ ರೈತ ಮುಕ್ತಿ ಮಹಾ ಪಾದಯಾತ್ರೆ ನಡೆಸಿ ಲಕ್ಷಾಂತರ ರೈತರು ಮತ್ತು ಕೃಷಿ ಕೂಲಿಕಾರರು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ತಿಳಿಸಿದರು.
ಈ ರೈತ ಮುಕ್ತಿ ಮಹಾ ಪಾದಯಾತ್ರೆಯನ್ನು ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಘಟಿಸಲು ಉದ್ದೇಶಿಸಲಾಗಿದ್ದು, ಇದರ ರೂಪುರೇಷೆಗಳನ್ನು ಅಂತಿಮಗೊಳಿಸಲು ಇದೇ 31ರಂದು ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.