ಕೊಲಂಬೊ: ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿರುವ ಶ್ರೀಲಂಕಾದಲ್ಲಿ ಉಚ್ಛಾಟನೆಗೊಂಡಿರುವ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಅವರ ಅಂಗರಕ್ಷಕ ಜನರ ಮೇಲೆ ಗುಂಡು ಹಾರಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಸೆಲಾನ್ ಪೆಟ್ರೋಲಿಯಂ ಕಾರ್ಪೋರೇಷನ್ ನಲ್ಲಿರುವ ತಮ್ಮ ಕಚೇರಿಗೆ ಅರ್ಜುನ ರಣತುಂಗ ತೆರಳಿದ್ದರು. ಈ ವೇಳೆ ನೂತನ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ಅರ್ಜುನ ರಣತುಂಗ ಕಚೇರಿ ಪ್ರವೇಶಿಸದಂತೆ ತಡೆದಿದ್ದಾರೆ. ಅಲ್ಲದೇ ರಣತುಂಗ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ರಣತುಂಗ ಅಂಗರಕ್ಷಕರು ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಅರ್ಜುನ ರಣತುಂಗ ಅವರ ಇಬ್ಬರು ಅಂಗರಕ್ಷಕರನ್ನು ಬಂಧಿಸಲಾಗಿದೆ.
ಶುಕ್ರವಾರ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಉಚ್ಚಾಟಿಸಿ, ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು. ಅವರು ಸೋಮವಾರ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.