ಪ್ರಧಾನಿ ಮೋದಿ ಮನ್ ಕಿ ಬಾತ್: ರನ್ ಫಾರ್ ಯುನಿಟಿಯಲ್ಲಿ ಭಾಗಿಯಾಗಿ ಯುವಕರಿಗೆ ಪ್ರಧಾನಿ ಕರೆ

ನವದೆಹಲಿ: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಮಹಾ ದಾರ್ಶನಿಕ ವ್ಯಕ್ತಿ. ಸ್ವಾತಂತ್ರ್ಯಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಿದ್ದರು. ಅ.31 ರಂದು ಪಟೇಲ್ ಅವರ ಜನ್ಮ ದಿನವಾಗಿದ್ದು, ಅಂದು ನಮ್ಮ ದೇಶದ ಯುವಕರು ‘ರನ್ ಫಾರ್ ಯುನಿಟಿ’ಯಲ್ಲಿ ಭಾಗಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 49ನೇ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಮೊದಲ ಗೃಹ ಮಂತ್ರಿ ಹಾಗೂ ಉಕ್ಕಿನ ಮನುಷ್ಯನೆಂದೇ ಖ್ಯಾತರಾಗಿರುವ ಸರ್ದಾರ್ ಪಟೇಲ್ ಅವರನ್ನು ಪ್ರಧಾನಿ ಮೋದಿ ಸ್ಮರಿಸಿದರು.

ಈ ಬಾರಿಯ ಸರ್ದಾರ್ ಪಟೇಲರ ಜನ್ಮದಿನ ಅತ್ಯಂತ ವಿಶೇಷವಾಗಿ ಆಚರಿಸಲಾಗುವುದು. ಅವರ ಬೃಹತ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗುವುದು. ನರ್ಮದಾ ನದಿ ಬಳಿ ನಿರ್ಮಾಣಗೊಂಡಿರುವ ಸ್ಟ್ಯಾಚು ಆಫ್ ಯುನಿಟಿಯನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇವೆ. ಈ ಪ್ರತಿಮೆ ಅಮೆರಿಕಾದ ಸ್ಟ್ಯಾಚು ಆಫ್ ಲಿಬರ್ಟಿಗಿಂದಲೂ ಎರಡು ಪಟ್ಟು ಎತ್ತರವನ್ನು ಹೊಂದಿದೆ. ಸರ್ದಾರ್ ರಂತೆ ಅವರ ಪ್ರತಿಮೆ ಕೂಡ ಭಾರತದ ಹೆಮ್ಮೆಯಾಗಲಿದೆ ಎಂದು ಹೇಳಿದರು.

ಇದೇ ವೇಳೆ ಏಷ್ಯನ್‌ ಪ್ಯಾರಾ ಗೇಮ್ಸ್‌ ಮತ್ತು ಯೂತ್ ಸಮ್ಮರ್‌ ಒಲಿಂಪಿಕ್ಸ್‌ ಕ್ರೀಡಾಪಟುಗಳನ್ನು ಭೇಟಿಯಾಗುವ ಅದೃಷ್ಟ ಲಭಿಸಿತ್ತು. ನಮ್ಮ ದೇಶದ ಕೀರ್ತಿ ಪತಾಕೆಯನ್ನು ಜಗತ್ತಿನ ಎಲ್ಲೆಡೆ ಸಾರಲು ಕ್ರೀಡಾಪಟುಗಳು ಸಾಕಷ್ಟು ಬೆವರು ಹರಿಸುತ್ತಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು, ದೇಶಕ್ಕೆ ಭದ್ರ ಬುನಾದಿ ಹಾಕಿ ಕಟ್ಟಲು ಸ್ಫೂರ್ತಿ, ಶಕ್ತಿ, ಶ್ರಮ ಮತ್ತು ಗಟ್ಟಿತನ ಬೇಕಾಗುತ್ತದೆ. ಅದರಂತೆ ನಮ್ಮ ಕ್ರೀಡಾಪಟುಗಳು ಸಾಕಷ್ಟು ಪದಕ ತಂದು ದೇಶಕ್ಕೆ ಹೆಸರು ತಂದಿದ್ದಾರೆ ಎಂದರು.

ಇನ್ನು ಈ ಬಾರಿಯ ನವೆಂಬರ್ 11 ಕೂಡ ವಿಶೇಷ ದಿನವಾಗಿದ್ದು, ಅಂದು ಮೊದಲನೇ ವಿಶ್ವ ಯುದ್ಧ ನಡೆದು 100 ವರ್ಷಗಳಾಗುತ್ತವೆ. ನಮ್ಮ ಯೋಧರು ಯುದ್ಧದಲ್ಲಿ ಸಾಕಷ್ಟು ತ್ಯಾಗ -ಬಲಿದಾನ ಮಾಡಿದ್ದರು. ಯುದ್ಧ ನಡೆದಾಗ ನಾವು ಎರಡನೆಯವರಾಗಿರುತ್ತೇವೆಂಬುದನ್ನ ನಮ್ಮ ಯೋಧರು ಇಡೀ ವಿಶ್ವಕ್ಕೆ ತೋರಿಸಿದ್ದರು ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ