ಬೆಂಗಳೂರು, ಅ.27-ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿರುವುದು ಸರಿಯಷ್ಟೆ. ಬಹುತೇಕ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ತುಕ್ಕು ಹಿಡಿಯುತ್ತಿರುವುದು ವಿಪರ್ಯಾಸ.
ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಕಾಕ್ಸ್ಟೌನ್ನ ವಾರ್ಡ್ ನಂ.79ರಲ್ಲಿ ಶಾಸಕರ ಅನುದಾನದಲ್ಲಿ ವಿಸ್ತಾರವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗಿದೆ. ಪ್ರಾರಂಭದಲ್ಲಿ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದ್ದ ಈ ಘಟಕ ಈಗ ಕೆಟ್ಟು ನಿಂತು ಆರು ತಿಂಗಳು ಕಳೆದಿದೆ. ಇಲ್ಲಿಯವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ.
ಖಾಸಗಿ ನೀರು ಸರಬರಾಜುದಾರರಲ್ಲಿ 20 ಲೀಟರ್ ನೀರಿಗೆ 25 ರಿಂದ 30 ರೂ. ಹಣ ಕೊಟ್ಟು ಈ ಭಾಗದ ಜನರು ಖರೀದಿಸುತ್ತಿದ್ದರು. ಸರ್ಕಾರದಿಂದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾದ ಮೇಲೆ 5 ರೂ. ಕಾಯಿನ್ ಹಾಕಿ ನೀರನ್ನು ಪಡೆದುಕೊಳ್ಳುತ್ತಿದ್ದರು. ಇದರಿಂದ ಈ ಭಾಗದ ಜನತೆಗೆ ಬಹಳಷ್ಟು ಉಪಯೋಗವಾಗುತ್ತಿತ್ತು. ಆದರೆ ಇದು ಕೆಟ್ಟು ಹೋಗಿ ಆರು ತಿಂಗಳು ಕಳೆದಿವೆ. ಇದರ ದುರಸ್ತಿಗೆ ಯಾವೊಬ್ಬ ಅಧಿಕಾರಿಯೂ ತಲೆಕೆಡಿಸಿಕೊಂಡಿಲ್ಲ. ಇದರಿಂದ ಈ ಭಾಗದ ಜನರು ಪಕ್ಕದ ವಾರ್ಡ್ಗಳಲ್ಲಿರುವ ಘಟಕದಲ್ಲಿ ನೀರನ್ನು ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಘಟಕ ದುರಸ್ತಿಗೆ ಮುಂದಾಗಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.