ಬೆಂಗಳೂರು, ಅ.27-ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಾಜರಾಗದ ಹಿನ್ನೆಲೆ ಅವರು ನವೆಂಬರ್ 1 ರೊಳಗೆ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿ ಗುರುಗಳ ಬಳಿ ಕ್ಷಮೆ ಯಾಚಿಸಬೇಕೆಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವ ಪಡೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಯುವ ಪಡೆಯ ರಾಜ್ಯಾಧ್ಯಕ್ಷ ಕೆ.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರವೇ ವಾಲ್ಮೀಕಿ ಜಯಂತಿಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಾಜರಾಗದೆ ಸಮಸ್ತ ವಾಲ್ಮೀಕಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಇದು ಖಂಡನೀಯ ಎಂದರು.
ಹಿಂದಿನ ವರ್ಷ 5 ರಿಂದ 10 ಲಕ್ಷ ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಗಣ್ಯರು ಭಾಗವಹಿಸಿದ್ದರು. ಆದರೆ ಈ ವರ್ಷ ಇವರು ಉದ್ದೇಶಪೂರ್ವಕವಾಗಿಯೇ ನಮ್ಮ ಜನಾಂಗವನ್ನು ತುಳಿಯುತ್ತಿದ್ದಾರೆ ಎಂಬುದು ನಮ್ಮ ಭಾವನೆಯಾಗಿದೆ ಎಂದರು.
ಆದ್ದರಿಂದ ಇವರು ವಾಲ್ಮೀಕಿ ಗುರುಪೀಠಕ್ಕೆ ಬಂದು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಬಳಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನ.2 ರಂದು ಕೆಪಿಸಿಸಿ ಕಚೇರಿ ಮತ್ತು ಜೆ.ಪಿ.ಭವನದ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಯುವಪಡೆಯ ಸದಸ್ಯರಾದ ಗಂಗಾಧರ್, ಆಂಜನಪ್ಪ, ಶಿವಕುಮಾರ್ ಸೇರಿದಂತೆ ಮತ್ತಿತರರಿದ್ದರು.