ಬೆಂಗಳೂರು, ಅ.27- ಅತ್ಯುತ್ತಮ ನಗರ ಬಸ್ ಸೇವೆಗಾಗಿ ಬಿಎಂಟಿಸಿ, ಕೇಂದ್ರ ಸರ್ಕಾರದ ಉತ್ಕೃಷ್ಟ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ ಪ್ರತಿವರ್ಷ ನಗರ ಸಾರಿಗೆ ವಿಭಾಗದಲ್ಲಿ ಈ ಪ್ರಶಸ್ತಿ ನೀಡುತ್ತಿದ್ದು, ಈ ಸಾಲಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದೆ.
ನವೆಂಬರ್ 4ರಂದು ನಾಗ್ಪುರದಲ್ಲಿ ನಡೆಯುವ 11ನೆ ನಗರ ಚಲನಶೀಲನೆ ಇಂಡಿಯಾ ಸಮಾವೇಶ ಮತ್ತು ವಸ್ತುಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮಹಾರಾಷ್ಟ್ರದ ಇಂಧನ ಖಾತೆ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ನಗರ ಸಾರಿಗೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಸಣ್ಣ ಮತ್ತು ಮಧ್ಯಮ ಪಟ್ಟಣ, ನಗರಗಳಲ್ಲಿ ನಗರ ಬಸ್ ಸೇವೆ ವಿಭಾಗದಲ್ಲಿ ಈ ಪ್ರಶಸ್ತಿಗೆ ಬಿಎಂಟಿಸಿಯನ್ನು ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸಿನಂತೆ ಬಿಬಿಎಂಟಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ವಿ.ಎಸ್. ಪಾಂಡೆ ಅವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ ಸಚಿವರು ಅಥವಾ ಇಲಾಖೆಯ ಮುಖ್ಯಸ್ಥರು ತಮ್ಮ ತಂಡದೊಂದಿಗೆ ಈ ಪ್ರಶಸ್ತಿ ಸ್ವೀಕರಿಸಬೇಕು ಎಂದೂ ಪತ್ರದಲ್ಲಿ ಮನವಿ ಮಾಡಲಾಗಿದೆ.