ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಕಾರಣರಾಗಿರುವವರು ಉಗ್ರರ ಕಾರ್ಯಕರ್ತರಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ನಡೆದ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಓರ್ವ ಯೋಧ ಹುತಾತ್ಮರಾದ ಪ್ರಕರಣ ಸಂಬಂಧ ಕಾಲಾಳು ಪಡೆ (ಇನ್’ಫೆಂಟ್ರಿ ಡೇ) ದಿನ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯ ಅಮರ ಜವಾನ್ ಜ್ಯೋತಿಯಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ರಾವತ್, ಕಲ್ಲು ತೂರಾಟದ ವೇಳೆ ಹುತಾತ್ಮರಾಗಿರುವ ಯೋಧ ರಸ್ತೆ ನಿರ್ಮಾಣ ಕಾರ್ಯ ನಡೆಸುತ್ತಿದ್ದ ವೇಳೆ ಗಡಿ ರಸ್ತೆಗಳನ್ನು ಕಾಯುತ್ತಿದ್ದ ತಂಡದೊಂದಿಗಿದ್ದರು. ಕೆಲ ಜನರು ಕಲ್ಲು ತೂರಾಟಗಾರರನ್ನು ಭಯೋತ್ಪಾದಕರ ಬೆಂಬಲಿಗರೆಂದು ತಿಳಿಯಬೇಡಿ ಎಂದು ಹೇಳುತ್ತಾರೆ. ಕಲ್ಲು ತೂರಾಟಗಾರರು ಉಗ್ರರ ಕಾರ್ಯಕರ್ತರು. ಪ್ರತೀ ಬಾರಿ ಸೇನೆ ಸುಮ್ಮನೆ ಇದ್ದು, ನೋವನ್ನು ಸಹಿಸಿಕೊಳ್ಳುತ್ತಿದೆ. ಆದರೆ, ಈ ಬಾರಿ ಕಲ್ಲು ತೂರಾಟಗಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.
ಕಲ್ಲು ತೂರಾಟಗಾರರ ವಿರುದ್ಧ ಈ ಬಾರಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಬೇಕೆಂದು ಪಾಕಿಸ್ತಾನ ಬಯಸುತ್ತಿದೆ. ಆದರೆ, ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸಿದ್ಧವಿದೆ. ಉಗ್ರರ ಕಾರ್ಯಚಟುವಟಿಕೆಗಳ ವಿರುದ್ಧ ಯಾವುದೇ ರೀತಿಯ ಕಾರ್ಯಾಚರಣೆ ನಡೆಸಲು ನಾವು ಸಂಪೂರ್ಣ ಸಮರ್ಥರಾಗಿದ್ದೇವೆ ಎಂದು ಗುಡುಗಿದ್ದಾರೆ.