ಶ್ರೀಲಂಕಾ ಕ್ಷಿಪ್ರ ರಾಜಕೀಯ ಬೆಳವಣಿಗೆ: ಪ್ರಧಾನಿ ರಾನಿಲ್ ವಜಾ, ಮಾಜಿ ಅಧ್ಯಕ್ಷ ರಾಜಪಕ್ಸ ನೂತನ ಪ್ರಧಾನಿ

ಕೊಲಂಬೋ: ಶ್ರೀಲಂಕಾದಲ್ಲಿ ಶುಕ್ರವಾರ ದಿಢೀರ್ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿದ್ದಾರೆ. ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರು ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಶ್ರೀಲಮಕಾ ಅಧ್ಯಕ್ಷ ಸಿರಿಸೇನ ನೇತೃತ್ವದ ಯುಪಿಎಫ್​ಎ ರಂಗ ಮತ್ತು ರಾನಿಲ್ ವಿಕ್ರಮಸಿಂಘೆ ಅವರ ಯುಎನ್​ಪಿ ಪಕ್ಷದ ಮೈತ್ರಿ ಸರಕಾರ ಮುರಿದುಬಿದ್ದ ಬೆನ್ನಲ್ಲೇ ಸಿರಿಸೇನಾ ಅವರು ಯುಎನ್​ಪಿ ಸಹಾಯವಿಲ್ಲದೆಯೇ ಅಧಿಕಾರ ರಚಿಸಿದ್ದಾರೆ.
ಆದರೆ, ರಾಜಪಕ್ಸ ಮತ್ತು ಸಿರಿಸೇನ ಅವರ ಪಕ್ಷಗಳ ಒಟ್ಟಾರೆ ಬಲಾಬಲ 95 ಸ್ಥಾನ ಮಾತ್ರ ಇದೆ. ಇಲ್ಲಿ ಸರಳ ಬಹುಮತಕ್ಕೆ 18 ಸ್ಥಾನಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ರಾಜಪಕ್ಸ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ ಕ್ರಮದಿಂದ ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ. ಯಾಕೆಂದರೆ, ಪ್ರಧಾನಿಯನ್ನು ವಜಾ ಮಾಡಬೇಕಾದರೆ ಸರಕಾರಕ್ಕೆ ಸ್ಪಷ್ಟ ಬಹುಮತವಾದರೂ ಬೇಕು. ಬಹುಮತವಿಲ್ಲದ ಸಿರಿಸೇನ ಅವರು ಪ್ರಧಾನಿ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಲಂಕಾದ ಸಂವಿಧಾನ ತಜ್ಞರು.
ಮಹಿಂದ ರಾಜಪಕ್ಸ ಅವರು ಪ್ರಧಾನಿಯಾಗಿ ಅಧಿಕಾರ ಪಡೆದಿರುವುದು ಅಸಾಂವಿಧಾನಿಕವಾಗಿದೆ. ತಾನು ಈಗಲೂ ಪ್ರಧಾನಿಯೇ ಆಗಿದ್ದೇನೆ ಎಂದು ರಾನಿಲ್ ವಿಕ್ರಮಸಿಂಘೆ ಅವರು ಹೇಳಿದ್ದಾರೆ. ಈ ಮೂಲಕ ಶ್ರೀಲಂಕಾದಲ್ಲಿ ಅಧಿಕಾರ ರಚನೆಯ ವಿಚಾರವು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.
ರಾನಿಲ್ ವಿಕ್ರಮಸಿಂಘೆ ಅವರ ಯುಎನ್​ಪಿ ಪಕ್ಷ 105 ಸ್ಥಾನಗಳನ್ನ ಹೊಂದಿದ್ದು, ಅತಿದೊಡ್ಡ ಪಕ್ಷವೆನಿಸಿದೆ. 2015ರಲ್ಲಿ ವಿಕ್ರಮಸಿಂಘೆ ಮತ್ತು ಮೈತ್ರಿಪಾಲ ಸಿರಿಸೇನ ಇಬ್ಬರೂ ಸೇರಿ ಸರಕಾರ ರಚಿಸಿದ್ದರು. ಶ್ರೀಲಂಕಾದ ಅಧ್ಯಕ್ಷರಾಗಿ 10 ವರ್ಷ ಮಹಿಂದಾ ರಾಜಪಕ್ಸ ನಡೆಸಿದ್ದ ಆಡಳಿತಕ್ಕೆ ಅಂತ್ಯವಾಡಿದ್ದರು. ರಾಜಪಕ್ಸ ಸರಕಾರದಲ್ಲಿ ಮಂತ್ರಿಯಾಗಿದ್ದ ಸಿರಿಸೇನಾ ಅವರು ಕಳೆದ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಸ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈಗ ಸಿರಿಸೇನಾ ಅವರ ಸರಕಾರದಲ್ಲಿ ರಾಜಪಕ್ಸ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ