ಬೆಂಗಳೂರು, ಅ.26- ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಾಲಿನ ಅತ್ಯಂತ ನಿರ್ಣಾಯಕ ಕ್ಷೇತ್ರವೆನಿಸಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರ್ಕಾರದ ಮೇಲೆ ಪರಿಣಾಮ ಬೀರಬಹುದೆಂದೇ ಹೇಳಲಾಗುತ್ತಿರುವ ಜಮಖಂಡಿಯಲ್ಲಿ ಕಾಂಗ್ರೆಸ್ ಗೆದ್ದರೆ ಸರ್ಕಾರ ಅಪಾಯದ ತೂಗುಕತ್ತಿಯಿಂದ ಪಾರಾಗುವುದು ಖಚಿತ.
ಒಂದು ವೇಳೆ ಬಿಜೆಪಿ ಇಲ್ಲಿಯೂ ಗೆದ್ದು ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದರೆ ದೋಸ್ತಿ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ಅರಿತೇ ಬಿಜೆಪಿ ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳ ಚುನಾವಣೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತನ್ನೆಲ್ಲಾ ಚಿತ್ತವನ್ನು ಜಮಖಂಡಿಯತ್ತ ಕೇಂದ್ರೀಕರಿಸಿದೆ.
ಕೃಷ್ಣಾನದಿಯ ದಡದಲ್ಲಿರುವ ಜಮಖಂಡಿ ವಿಧಾನಸಭಾ ಕ್ಷೇತ್ರ ಹೈದರಾಬಾದ್ ಕರ್ನಾಟಕ ಭಾಗದಲ್ಲಿದ್ದರೂ ರೈತರೇನು ಸಂಕಷ್ಟಕ್ಕೆ ಸಿಲುಕಿಲ್ಲ. ಆಲಮಟ್ಟಿ ಜಲಾಶಯ ನಿರ್ಮಾಣಕ್ಕೆ ಇಲ್ಲಿನ ರೈತರು ತಮ್ಮ ಜಮೀನನ್ನು ಬಿಟ್ಟುಕೊಟ್ಟು ನಿರಾಶ್ರಿತರಾಗಿದ್ದರೂ ಆದಾಯ, ವರಮಾನಕ್ಕೆ ಕೊರತೆ ಇಲ್ಲ. ಇಂತಹ ಸಂದರ್ಭದಲ್ಲೇ ಉಪಚುನಾವಣೆ ಆಕಸ್ಮಿಕವಾಗಿ ಎದುರಾಗಿರುವುದು ಸುಡುವ ಬಿಸಿಲಿನಲ್ಲೂ ಅಭ್ಯರ್ಥಿಗಳ ಎದೆಬಡಿತ ಹೆಚ್ಚುವಂತೆ ಮಾಡಿದೆ. ಈ ಕ್ಷೇತ್ರದಲ್ಲಿ ಏಳು ಅಭ್ಯರ್ಥಿಗಳು ಕಣದಲ್ಲಿದ್ದರೂ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ.
ರಸ್ತೆ ಅಪಘಾತದಲ್ಲಿ ನಿಧನರಾದ ಮಾಜಿ ಸಚಿವ ಹಾಗೂ ಶಾಸಕ ಸಿದ್ದುನ್ಯಾಮೇಗೌಡರ ಪುತ್ರ ಆನಂದ್ ನ್ಯಾಮೇಗೌಡ, ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ತಮ್ಮ ಅದೃಷ್ಟವನ್ನೇ ಪಣಕ್ಕಿಟ್ಟಿದ್ದಾರೆ.
ಮಾಜಿ ಸಿಎಂಗಳ ಹಣಾಹಣಿ:
ಜಮಖಂಡಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ನೇರ ಹಣಾಹಣಿ ನಡೆದಿದೆ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ನೆಪಮಾತ್ರ. ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಕೂಡ ನೇಪಥ್ಯಕ್ಕೆ ಸರಿದಿದೆ.
ಅಹಿಂದ ಮತಗಳ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಕ್ಷೇತ್ರವನ್ನು ಗೆಲ್ಲಿಸಿಕೊಡುವ ಮೂಲಕ ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಜಮಖಂಡಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದು, ಇಂದಿನಿಂದ ಮೂರು ದಿನಗಳು ಇಲ್ಲೇ ಠಿಕಾಣಿ ಹೂಡಲಿದ್ದಾರೆ.
ಕ್ಷೇತ್ರದಲ್ಲಿ ಲಿಂಗಾಯಿತ ಮತಗಳು ನಿರ್ಣಾಯಕವಾಗಿರುವುದರಿಂದ ಯಡಿಯೂರಪ್ಪ ಕೂಡ ಎರಡು ಬಾರಿ ಜಮಖಂಡಿಗೆ ಆಗಮಿಸಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಪಕ್ಷದಲ್ಲಿ ಉಂಟಾಗಿದ್ದ ಅಸಮಾಧಾನ ಹಾಗೂ ಭಿನ್ನಮತೀಯರನ್ನು ಸರಿಪಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪರ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರು, ಶಾಸಕರು ಪ್ರಚಾರ ನಡೆಸುತ್ತಿದ್ದರೆ, ಬಿಜೆಪಿಗೆ ಆರ್ಎಸ್ಎಸ್ ಸಂಘಟನೆ ಬೆಂಬಲಕ್ಕೆ ನಿಂತಿದೆ.
ಅನುಕಂಪ-ಕೊನೆ ಚುನಾವಣೆ:
ಆನಂದ್ನ್ಯಾಮೇಗೌಡರಿಗೆ ತಂದೆಯ ಸಾವಿನ ಅನುಕಂಪ ಕೈ ಹಿಡಿಯಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ಗಿದೆ. ಹೀಗಾಗಿಯೇ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಿದ್ದುನ್ಯಾಮೇಗೌಡರ ಪತ್ನಿ, ಪುತ್ರರು, ಸಂಬಂಧಿಕರು, ಹಿತೈಷಿಗಳು ಸೇರಿ ಅನೇಕರು ಆಗಮಿಸಿ ಕಣ್ಣೀರು ಹಾಕಿದ್ದರು.
ಇನ್ನು ಕ್ಷೇತ್ರದಲ್ಲಿ ಪ್ರಚಾರ ನಡೆಸುವ ವೇಳೆ ತಮ್ಮ ತಂದೆಯ ಸಾಧನೆಗಳು, ಬ್ಯಾರೇಜ್ ನಿರ್ಮಾಣ ಹಾಗೂ ಕ್ಷೇತ್ರಕ್ಕೆ ಅವರು ಕಂಡಿದ್ದ ಕನಸುಗಳನ್ನು ನನಸು ಮಾಡಲು ತಮ್ಮನ್ನು ಗೆಲ್ಲಿಸಿಕೊಡಬೇಕೆಂದು ಪ್ರಚಾರ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಅನುಕಂಪ ಕೈ ಹಿಡಿದರೆ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬುದನ್ನು ಅರಿತಿರುವ ಬಿಜೆಪಿ ಕೊನೆಯ ಚುನಾವಣೆ ಅಸ್ತ್ರವನ್ನು ಬಳಸಿದೆ. ಕಳೆದ ಎರಡು ಚುನಾವಣೆಯಲ್ಲೂ ಸೋತಿರುವ ಶ್ರೀಕಾಂತ್ ಕುಲಕರ್ಣಿ, ಇದು ನನ್ನ ಕೊನೆಯ ಚುನಾವಣೆ, ನಾನು ಇನ್ನು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಹೇಳುತ್ತೇನೆ ಎಂದು ಘೋಷಿಸಿದ್ದಾರೆ.
ಈ ಮೊದಲ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಆದರೆ, ಅವರು ಅನಿವಾರ್ಯ ಕಾರಣಗಳಿಂದ ವಿದೇಶ ಪ್ರವಾಸಕ್ಕೆ ತೆರಳಿದ್ದರಿಂದ ಪಕ್ಷದ ಮುಖಂಡ ಅರವಿಂದ ಲಿಂಬಾವಳಿ ಕ್ಷೇತ್ರದಾದ್ಯಂತ ಕಾರ್ಯಕರ್ತರನ್ನು ಒಗ್ಗೂಡಿಸಿ ಪ್ರಚಾರ ನಡೆಸುತ್ತಿದ್ದಾರೆ.
ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಗೋವಿಂದಕಾರಜೋಳ, ಮುಖಂಡರಾದ ಸಂಗಮೇಶ ನಿರಾಣಿ, ಉಮೇಶ ಮಹಾಬಳಶೆಟ್ಟಿ, ಬಸವರಾಜ ಸಿಂಧೂರ ಸೇರಿದಂತೆ ಅನೇಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಕ್ಷೇತ್ರದಲ್ಲಿ ಪಂಚಮ ಸಾಲಿ ಮತ್ತು ಗಾಣಿಗ ಲಿಂಗಾಯಿತ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಉಳಿದಂತೆ ದಲಿತ, ಅಲ್ಪಸಂಖ್ಯಾತ, ಬ್ರಾಹ್ಮಣ, ಜೈನ ಸಮುದಾಯ ಮತಗಳ ಮೇಲೆ ಎರಡೂ ಪಕ್ಷಗಳು ಕಣ್ಣಿಟ್ಟಿವೆ. ಹೀಗಾಗಿಯೇ ಪ್ರತಿ ದಿನ ಎಲ್ಲರೂ ಜಾತಿ ಆಧಾರಿತ ಸಭೆ, ಸಮಾರಂಭಗಳನ್ನು ನಡೆಸಿ ಮತದಾರನ ಮನವೊಲಿಕೆಗೆ ಮುಂದಾಗಿದ್ದಾರೆ.
ಮತದಾರರು:
ಜಮಖಂಡಿಯಲ್ಲಿ ಒಟ್ಟು 1,98,822 ಮತದಾರರಿದ್ದಾರೆ. ಇದರಲ್ಲಿ ಪಂಚಮಸಾಲಿ 25ಸಾವಿರ, ಗಾಣಿಗ ಸಮುದಾಯ 15ಸಾವಿರ, ದಲಿತರು 35ಸಾವಿರ, ಅಲ್ಪಸಂಖ್ಯಾತರು 28 ಸಾವಿರ ಹಾಗೂ ಬ್ರಾಹ್ಮಣ 5ಸಾವಿರ ಹಾಗೂ ಜೈನ ಸಮುದಾಯದಲ್ಲಿ 10ಸಾವಿರ ಮತದಾರರಿದ್ದಾರೆ.
ಜಮಖಂಡಿ ಉಪಚುನಾವಣೆ ಪ್ರಚಾರದ ಆರಂಭದಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿಯ ಇಬ್ಬರು ಪ್ರಮುಖ ನಾಯಕರ ಮೇಲೆ ದೂರು ದಾಖಲಾಗಿದೆ.
ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಚುನಾವಣಾಧಿಕಾರಿ ದೂರು ದಾಖಲಿಸಿಕೊಂಡಿದ್ದಾರೆ.
ಡಾ.ಜಿ.ಪರಮೇಶ್ವರ್ ಅವರು ಅ.23ರಂದು ತಮ್ಮ ಪಕ್ಷದ ಅಭ್ಯರ್ಥಿ ಆನಂದ ನ್ಯಾಮಗೌಡ ಅವರ ಪರ ಜಮಖಂಡಿಯ ಸಾವಳಗಿಯಲ್ಲಿ ಪ್ರಚಾರ ಮಾಡುವಾಗ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ರಸ್ತೆಗೆ ಡಾಬರೀಕರಣ ಮಾಡ್ತೀನಿ ಎಂದು ಆಶ್ವಾಸನೆ ನೀಡಿದ್ದರು. ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಆಶ್ವಾಸನೆ, ಸರ್ಕಾರಿ ಯೋಜನೆ ಘೋಷಣೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಆದರೆ, ಪರಮೇಶ್ವರ್ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ಜನರಿಗೆ ಆಶ್ವಾಸನೆ ನೀಡಿದ್ದರಿಂದ ಅವರ ವಿರುದ್ಧ ದೂರು ದಾಖಲಾಗಿದೆ.
ಇನ್ನು ಅದೇ ದಿನ ಜಮಖಂಡಿಯ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದ ಶಾಸಕ ಎಸ್.ಎ.ರಾಮದಾಸ್ ಅವರು ಗಾಯಕಿಯರನ್ನು ಸನ್ಮಾನಿಸುವ ನೆಪದಲ್ಲಿ ಹಣ ಹಂಚಿಕೆ ಮಾಡಿದ್ದರು. ಈ ಸಂಬಂಧ ರಾಮದಾಸ್ ವಿರುದ್ಧ ದೂರು ದಾಖಲಾಗಿದೆ. ಕಳೆದ 23ರಂದು ಈ ಎರಡು ಘಟನೆಗಳು ನಡೆದಿದ್ದವು. ಎರಡು ಪ್ರಕರಣಗಳನ್ನು ಪರಿಶೀಲಿಸಿ, ನೀತಿ ಸಂಹಿತೆ ಉಲ್ಲಂಘನೆಯಡಿ ಚುನಾವಣಾಧಿಕಾರಿ ದೂರು ದಾಖಲಿಸಿಕೊಂಡಿದ್ದಾರೆ.