ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಮುಂದಾದ ಪಾಕಿಸ್ತಾನ

ಇಸ್ಲಾಮಾಬಾದ್‌: ಭಾರತ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಲು ಸಿದ್ಧತೆ ನಡೆಸುತ್ತಿರುವ ನಡುವೆಯೇ ಪಾಕಿಸ್ತಾನವೂ ಕೂಡ ಈ ಯೋಜನೆಗೆ ಮುಮ್ದಾಗಿದೆ. ಚೀನಾದ ಸಹಾಯದೊಂದಿಗೆ 2022ಕ್ಕೆ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಕೈಗೊಳ್ಳುತ್ತಿರುವ ಬಗ್ಗೆ ಪಾಕಿಸ್ತಾನ ಘೋಷಣೆ ಮಾಡಿದೆ.

ಈ ಕುರಿತು ಸಚಿವ ಫಹಾದ್‌ ಚೌಧರಿ ಘೋಷಣೆ ಮಾಡಿದ್ದು, ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ನವೆಂಬರ್‌ 3ಕ್ಕೆ ಇಮ್ರಾನ್‌ ಖಾನ್‌ ಬೀಜಿಂಗ್‌ಗೆ ಭೇಟಿ ನೀಡುತ್ತಿದ್ದು, ಮಹತ್ವದ ಯೋಜನೆಗೆ ಚೀನಾ ಸಹಕರಿಸುವ ಕುರಿತಂತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನ ಬಾಹ್ಯಾಕಾಶ ಸಂಸ್ಥೆ ಮತ್ತು ಚೀನಾದ ಕಂಪನಿ ಜತೆ ಈಗಾಗಲೇ ಯೋಜನೆ ಕುರಿತಾದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.

ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ 4ನೇ ರಾಷ್ಟ್ರ ಭಾರತವಾಗಲಿದೆ. 2022ಕ್ಕೆ ಮಾನವನನ್ನು ಕಳುಹಿಸಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಘೋಷಿಸಿದ್ದರು.

ಇದೀಗ ಪಾಕಿಸ್ತಾನವೂ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಹತ್ವದ ಯೋಜನೆಗೆ ಮುಂದಾಗುವ ಮೂಲಕ ಭಾರತಕ್ಕೆ ಸೆಡ್ದುಹೊಡೆಯಲು ಯೋಜನೆ ರೂಪಿಸಿದೆ. ಚೀನಾ ಸಹಾಯ ಮಾಡುತ್ತಿರುವ ಕಾರಣ ಭಾರತದ ಜತೆ ಬಾಹ್ಯಾಕಾಶ ಯೋಜನೆ ವಿಚಾರದಲ್ಲೂ ಜಿದ್ದಿಗೆ ಬಿದ್ದಿರುವುದು ಸ್ಪಷ್ಟವಾಗಿದೆ.

ಚೀನಾ 2003ರಲ್ಲಿ ಮೊದಲ ಬಾರಿಗೆ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಕೈಗೊಂಡಿತ್ತು. ಈ ಮೂಲಕ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ವಿಶ್ವದ 3ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ