ನವದೆಹಲಿ: ಸಿಬಿಐ ಡೈರೆಕ್ಟರ್ ಅಲೋಕ್ ವರ್ಮಾ ವಿರುದ್ಧದ ಆರೋಪಗಳ ಕುರಿತು 14 ದಿನಗಳೊಳಗಾಗಿ ತನಿಖೆ ಪೂರ್ಣಗೊಳಿಸುವಂತೆ ಸಿವಿಸಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಕಡ್ಡಾಯ ರಜೆ ಪ್ರಶ್ನಿಸಿ ಅಲೋಕ್ ವರ್ಮಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರಿದ್ದ ಪೀಠ, 14 ದಿನಗಳೊಳಗಾಗಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸಿವಿಸಿಗೆ ಸೂಚನೆ ನೀಡಿದೆ.
ಅಲೋಕ್ ವರ್ಮಾ ಪರವಾಗಿ ಹಿರಿಯ ವಕೀಲ ಫಾಲಿ ನಾರಿಮನ್ ಹಾಗೂ ಸಂಜಯ್ ಹೆಗ್ಡೆಯವರು ವಾದ ಮಂಡಿಸಿದ್ದು, ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ವಾದ ಮಂಡಿಸಿದ್ದಾರೆ.
ವಿಚಾರಣೆ ವೇಳೆ ವಾದ ಮಂಡಿಸಿದ ಸಿವಿಸಿ ಪರ ವಕೀಲರು ತನಿಖೆಗೆ ಹೆಚ್ಚಿನ ಸಮಯ ನೀಡುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು. ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ದೇಶದ ಹಿತದೃಷ್ಟಿಯಿಂದ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಅಲೋಕ್ ವರ್ಮಾ ವಿರುದ್ಧ ಕೇಳಿ ಬಂದಿರುವ ಆರೋಪ ಸಂಬಂಧ 14 ದಿನಗಳೊಳಗಾಗಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿತು.
ಇನ್ನು ಸಿಬಿಐ ಹಂಗಾಮಿ ನಿರ್ದೇಶಕ ನಾಗೇಶ್ವರ್ ರಾವ್ ಅವರು ಯಾವುದೇ ನಿರ್ಧಾರಗಳನ್ನು ಕೈಗೊಳ್ಳದಂತೆ ತಿಳಿಸಿದ ನ್ಯಾಯಾಲಯ, ಕೇವಲ ದೈನಂದಿನ ಕಾರ್ಯ ನೋಡಿಕೊಳ್ಳಬೇಕು ಎಂದು ಹೇಳಿದೆ.
ಪ್ರಕರಣ ಸಂಬಂಧ ಕೇಂದ್ರ ಹಾಗೂ ಸಿವಿಸಿಗೆ ಸುಪ್ರೀಂ ನೋಟಿಸ್ ಜಾರಿ ಮಾಡಿದೆ.